ಹರಿಹರ, ಫೆ 10 (Daijiworld News/MB) : ಜೂನ್ನಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ವರದಿ ಸಲ್ಲಿಸಲಿದ್ದಾರೆ. ಆ ವರದಿ ಬಂದ ಕೂಡಲೇ ಪರಿಶಿಷ್ಟ ಪಂಗಡಕ್ಕೆ ಹೆಚ್ಚಿಸಬೇಕಾದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಭಾನುವಾರ ರಾಜನಹಳ್ಳಿಯಲ್ಲಿ ಎರಡನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತವಾಗಿ ಜನಜಾಗೃತಿ ಶಿಬಿರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, "ಈ ಸಮುದಾಯ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಎಂದಿಗೂ ಹುಸಿ ಮಾಡುವುದಿಲ್ಲ. ನಿಮಗೆ ದ್ರೋಹ ಬಗೆಯುವುದಿಲ್ಲ. ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ತೆರೆಯಬೇಕು ಎಂಬ ಬೇಡಿಕೆಯಿದೆ. ಮುಂಬರುವ ದಿನಗಳಲ್ಲಿ ಈ ಬೇಡಿಕೆಯನ್ನು ಕೂಡಾ ಈಡೇರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
35 ವರ್ಷಗಳಿಂದ ಪರಿವಾರ, ತಳವಾರ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡುವ ಕೆಲಸ ನಡೆದಿಲ್ಲ. ಈಗ ಕೇಂದ್ರ ಸರ್ಕಾರ ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡಲು ಅನುಮೋದನೆ ನೀಡಿದ್ದಾರೆ. ಅದೇ ರೀತಿ ಎಸ್.ಸಿ, ಎಸ್.ಟಿ ಮೀಸಲಾತಿಯನ್ನು ಇನ್ನೂ 10 ವರ್ಷಕ್ಕೆ ಮುಂದುವರಿಸಲು ಪ್ರಧಾನಿ ಒಪ್ಪಿದ್ದಾರೆ ಎಂದು ಹೇಳಿದರು.