ರಾಮನಗರ, ಫೆ 10 (Daijiworld News/MB) : ಕಾಶ್ಮೀರ ನಮ್ಮ ದೇಶಕ್ಕೆ ಸೇರಿದೆ , ನಾವೀಗ ಅಲ್ಲಿಗೆ ಹೋಗಬಹುದು. ಹಾಗೇಯೇ ರಾಮನಗರದ ಬಾಲಗೇರಿಗೆ ಹೋಗಬಹುದು, ಅಲ್ಲಿಂದ ಬರಬಹುದು. ಇನ್ನೊಂದು ಬಾಕಿ ಉಳಿದಿದೆ ಅದು ನಾಲಬಂದವಾಡಿ (ಮುಸ್ಲಿಂರೇ ಹೆಚ್ಚಿನದಾಗಿ ಅಲ್ಪ ಹಿಂದುಗಳು ವಾಸಿಸುವ ಬಡಾವಣೆ) ಅದು ಸ್ವಲ್ಪ ದಿನದ ಬಳಿಕ ನಮಗೆ ದೊರೆಯಲಿದೆ ಎಂದು ಆರ್ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪಥಸಂಚಲನದಲ್ಲಿ ಹೇಳಿದ್ದಾರೆ.
ರಾಮನಗರದಲ್ಲಿ ನಡೆದ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿ ಗಣವೇಷಧಾರಿಗಳನ್ನುದ್ದೇಶಿ ಮಾತನಾಡಿದ ಅವರು, ರಾಮನಗರದ ದುರ್ದೈವ ಇಲ್ಲಿ ರಾಮನ ಪರಂಪರೆ ಬೆಳೆದಿಲ್ಲ. ಬದಲಿಗೆ ರಾವಣನ ಪರಂಪರೆ ಬೆಳೆಯುವಂತಾಗಿದೆ. ದರ್ಪ, ದೌರ್ಜನ್ಯದಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲ. ಅಧಿಕಾರ ಹೆಚ್ಚು ದಿನ ಉಳಿಯುವುದು ಇಲ್ಲ. ಪರೋಕ್ಷವಾಗಿ ಮಾಜಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
ಮಂಗಳೂರು ಗಲಭೆ ವಿಚಾರವಾಗಿ ಮಂಗಳೂರನ್ನು ಪಾಕಿಸ್ತಾನದ ರೀತಿ ಮಾಡಲು ಮುಂದಾಗಿದ್ದರು. . ಅಷ್ಟು ಮಾತ್ರವಲ್ಲದೆ ಅಂದು ಮಂಗಳೂರಿನಲ್ಲಿ ನಡೆದ ಗಲಭೆ ಕಾಶ್ಮೀರದಲ್ಲಿ ನಡೆದಂತಿತ್ತು ಎಂದು ಹೇಳಿದರು.
ಅವರು ಕನಕಪುರಕ್ಕೆ ಭೇಟಿ ನೀಡಿದ್ದ ವಿಚಾರದ ಬಗ್ಗೆ ಮಾತನಾಡಿ, "ಕಪಾಲ ಬೆಟ್ಟದಲ್ಲಿ ಈಗಾಗಲೇ 11 ಅಡಿ ಎತ್ತರದ ಯೇಸು ಪ್ರತಿಮೆ ನಿಲ್ಲಿಸಿದ್ದು, 113 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಲ್ಲಿನ ಮುನೇಶ್ವರ ಕಲ್ಲಿನ ಮೇಲೆ ಶಿಲುಬೆ ನಿಲ್ಲಿಸಿದ್ದಾರೆ. ಪಕ್ಕದಲ್ಲಿನ ಕೆರೆಗೆ ಪಾದ್ರಿ ಕೆರೆ ಎನ್ನುತ್ತಾರೆ, ಅದು ಯಾವಾಗ ಪಾದ್ರಿ ಕೆರೆಯಾಯ್ತು ಎಂದು ಪ್ರಶ್ನಿಸಿದರು.
ಅಲ್ಲಿನ ಜನರಿಗೆ 2-3 ಎಕರೆ ಜಮೀನು ನೀಡುವುದಾಗಿ ಹೇಳಿ ಮತಾಂತರ ಮಾಡಿದ್ದಾರೆ. ಅಲ್ಲಿ ಕ್ರೈಸ್ತ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ ಇದು ಕ್ರಿಸ್ತನ ನಾಡಲ್ಲ, ಕೃಷ್ಣನ ನಾಡು ಎಂದು ಆಕ್ರೋಶಗೊಂಡರು.
ಭಾರತಕ್ಕೆ ಸ್ವಾತಂತ್ಯ್ರ ದೊರೆತ ಬಳಿಕ ಭಾರತದಲ್ಲಿ ದುರ್ಬಲ ಹಾಗೂ ಹೇಡಿಗಳ ನಾಯಕತ್ವವಿತ್ತು. ಆದರೆ ಈಗ ದೇಶದಲ್ಲಿ ಪ್ರಬಲ ನಾಯಕತ್ವವಿದೆ. ಪಾಕಿಸ್ತಾನಕ್ಕೆ ನಮ್ಮನ್ನು ಕೆಣಕುವುದು ಬಹಳ ಕಷ್ಟವಾಗಿದೆ ಎಂದು ಹೇಳಿದರು.
ಹೊರದೇಶದಿಂದ ಬಂದಿರುವ 2-3 ಕೋಟಿ ಜನರಿಗೆ ರೇಷನ್ ಕಾರ್ಡ್, ಭೂಮಿ ನೀಡಿಲ್ಲ, ಆ ನಿಟ್ಟಿನಲ್ಲಿ ಅಮಾಜಕ್ಕೆ ನ್ಯಾಯ ದೊರಕಿಸಲು ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು. ಪೌರತ್ವವನ್ನು ನೀಡಲಾಗುತ್ತದೆಯೇ ವಿನಃ ಕಸಿದುಕೊಳ್ಳುವುದಿಲ್ಲ ಎಂದರು.
ಸ್ವಾಮಿ ವಿವೇಕಾನಂದರವರು ಭಾಗವಹಿಸಿದ್ದು ಸರ್ವಧರ್ಮ ಸಮ್ಮೇಳನ ಅಲ್ಲ, ಅದು ವರ್ಡ್ ರಿಲಿಜಿಯನ್ ಕಾನ್ಫರೆನ್ಸ್, ರಿಲಿಜಿಯನ್ ಅನ್ನೋದು ಒಂದು ಮತ ಮಾತ್ರವಾಗಿದ್ದು ಕ್ರೈಸ್ತ ಧರ್ಮವೇ ಶ್ರೇಷ್ಠ ಅನ್ನೋದನ್ನ ತೋರಿಸಲು ಮಾಡಿದ್ದ ಕಾರ್ಯಕ್ರಮವಾಗಿತ್ತು. ಆದರೆ ಕಾರ್ಯಕ್ರಮದ ಬಳಿಕ ವಿವೇಕಾನಂದರು ಧರಿಸಿದ್ದ ಕೇಸರಿ ವಸ್ತ್ರವನ್ನ ಮುಟ್ಟಿದರೆ ಪಾವನರಾಗ್ತೇವೆ ಎಂಬ ಭಾವನೆ ಆ ಜನಗಳಿಗೆ ಬಂತು ಎಂದರು.