ದಾಸರಹಳ್ಳಿ, ಫೆ.10 (Daijiworld News/PY): "ದೆಹಲಿ ಚುನಾವಣಾ ಫಲಿತಾಂಶದ ನಂತರ ದೆಹಲಿ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೆ ಎಂದು ಗೊತ್ತಿಲ್ಲ" ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ತುಮಕೂರು ರಸ್ತೆಯ ಮಾದಾವರ ಬಳಿಯ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಫೆಡರೇಶನ್ ಆಫ್ ಇಂಡಿಯನ್ ಗ್ರಾನೈಟ್ ಹಾಗೂ ಸ್ಟೋನ್ ಇಂಡಸ್ಟ್ರಿ ಆಯೋಜಿಸಿದ್ದ ಸ್ಟೋನ್ -2020 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, "ದೆಹಲಿ ಚುನಾವಣೆ ನಂತರ ದೆಹಲಿಯೂ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೆ ಎಂದು ತಿಳಿದಿಲ್ಲ" ಎಂದರು.
"ಮಹೇಶ್ ಕುಮಟಳ್ಳಿ ಹಾಗೂ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಸಿಎಂ ಬಿಎಸ್ವೈ ಅವರು ಈಗಾಗಲೇ ಮಾತನಾಡಿ,ಸಮಾಧಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಬ್ಬರಿಗೂ ಸಚಿವ ಸ್ಥಾನ ಸಿಗಲಿದೆ. ರಾಜ್ಯ ಬಿಜೆಪಿ ಸರಕಾರದಲ್ಲಿ ಕಗ್ಗಂಟಾಗಿದ್ದ ಖಾತೆ ಹಂಚಿಕೆ ವಿಷಯಕ್ಕೆ ಸೋಮವಾರ ತೆರೆಬೀಳಲಿದೆ" ಎಂದು ತಿಳಿಸಿದರು.