ಮೈಸೂರು, ಫೆ.10 (Daijiworld News/PY): "ಮೈಸೂರು ಜಿಲ್ಲೆಯ ಅಭಿವೃದ್ದಿಗಾಗಿ ಸಚಿವ ಸ್ಥಾನ ನೀಡಬೇಕು. ಮೈಸೂರು ಭಾಗಕ್ಕೆ ಖಂಡಿತವಾಗಿಯೂ ಸಚಿವ ಸ್ಥಾನ ಸಿಗಬೇಕು. ಅದು ಮುಂದಿನ ದಿನಗಳಲ್ಲಿ ಆಗಲಿದೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸಂಪುಟ ಖಾತೆ ಹಂಚಿಕೆಯು ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ, ಹೀಗಾಗಲೇ ಕೆಲವರಿಗೆ ಹೆಚ್ಚುವರಿ ಖಾತೆ ನೀಡಿದ್ದಾರೆ. ಉಳಿದವರಿಗೆ ಸೋಮವಾರ ಖಾತೆ ಹಂಚಿಕೆಯಾಗಲಿದೆ. ಹಾಗೆಯೇ ಜಿಲ್ಲಾ ಉಸ್ತುವಾರಿ ಸ್ಥಾನಗಳು ನಿಗದಿಯಾಗಲಿವೆ" ಎಂದು ತಿಳಿಸಿದರು.
"ಕೆಲವರು ಮೂರು ನಾಲ್ಕು ಬಾರಿ ಗೆದ್ದವರಿದ್ದಾರೆ. ಅವರ ಜಿಲ್ಲೆಯ ಅಭಿವೃದ್ದಿಗಾಗಿ ಸಚಿವ ಸ್ಥಾನ ಕೇಳುವುದು ಸಹಜ. ಈ ವಿಚಾರವಾಗಿ ಸಹಜವಾಗಿ ಎಲ್ಲರಿಗೂ ಆಕಾಂಕ್ಷೆಯಿದೆ. ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ" ಎಂದರು.
"ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯದಿಂದ ಟಿಪ್ಪು ವಿಷಯವನ್ನು ಕೈಬಿಡಲು ಸಾಧ್ಯವಿಲ್ಲ. ಈ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಿದೆ. ವಿಸ್ತೃತ ಚರ್ಚೆ ನಂತರ ಇನ್ನೊಂದು ಸಮಿತಿ ಮಾಡಿ ಚರ್ಚೆ ಮಾಡಲಾಗುವುದು. ಈ ಬಾರಿ ಶಾಲೆಯ ಆರಂಭದ ದಿನದಿಂದಲೇ ಪುಸ್ತಕ ಸಮವಸ್ತ್ರ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಈ ಬಾರಿ ಪಠ್ಯದಿಂದ ಟಿಪ್ಪು ವಿಷಯ ಕೈ ಬಿಡಲು ಸಾಧ್ಯವಿಲ್ಲ" ಎಂದರು
ವಿದ್ಯಾರ್ಥಿಯೊಬ್ಬ ಪಕ್ಕೆಲುಬು ಪದವನ್ನು ತಪ್ಪಾಗಿ ಉಚ್ಛರಿಸಿದ್ದ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಅವರು, "ಇದು ಶಿಕ್ಷಕರ ಮನಸ್ಥಿತಿಯ ಪ್ರಶ್ನೆ. ಆ ಶಿಕ್ಷಕರು ಅಮಾನತು ವಾಪಸ್ಸು ಪಡೆಯಿರಿ ಅಂತಾ ನನ್ನ ಬಳಿ ಬಂದಿದ್ದರು. ಶಿಕ್ಷಕರ ಅಮಾನತು ವಾಪಸ್ಸು ಪಡೆಯೋಣ. ಅವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಇದಾದ ಮೇಲೂ ಪುಳಿಯೊಗರೆ ಹಾಗೂ ನಪುಂಸಕ ಪದಗಳ ತಪ್ಪಾಗಿ ಉಚ್ಛಾರಣೆ ಮಾಡಿದ ವಿಡಿಯೋಗಳು ವೈರಲ್ ಆಗಿವೆ. ಕೆಲವರಿಗೆ ರಾಜ್ಯೋತ್ಸವ ಅಂತಾ ಹೇಳಲು ಬರುವುದಿಲ್ಲ. ಕೆಲವರಿಗೆ ಕೊರತೆಗಳಿರುತ್ತವೆ. ಅದನ್ನು ಈ ರೀತಿ ಮಾಡುವುದು ಸರಿಯಲ್ಲ. ಈಗಾಗಲೇ ಶಾಲೆಯಲ್ಲಿ ಯಾರೂ ಮೊಬೈಲ್ ಬಳಸದಂತೆ ಸೂಚಿಸಲಾಗಿದೆ. ಆಗಾಗ ದೊಡ್ಡವರಲ್ಲಿ ಇರುವ ವಿಕೃತಿ ನಡೆಯುತ್ತಿವೆ. ಈ ವಿಚಾರವಾಗಿ ನಾವು ಕ್ರಮಕೈಗೊಳ್ಳುತ್ತೇವೆ" ಎಂದು ಹೇಳಿದರು.