ನವದೆಹಲಿ, ಫೆ 10 (Daijiworld News/MB) : ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಸರ್ಕಾರದ ವಿರೋಧ ಪಕ್ಷ ಮಾತ್ರವಲ್ಲದೇ ಬಿಜೆಪಿಯ ಮಿತ್ರ ಪಕ್ಷ ಕೂಡ ಈ ತೀರ್ಪಿನ ವಿರುದ್ಧ ಧ್ವನಿ ಎತ್ತಿದೆ.
ಉತ್ತರಾಖಂಡದ ಬಿಜೆಪಿ ನೇತೃತ್ವದ ಸರ್ಕಾರವು ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಪರಿಣಾಮಕಾರಿಯಾಗಿ ವಾದ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ ಏನೆಂದು ಪ್ರಶ್ನಿಸಿದೆ.
ಬಿಜೆಪಿಯ ಮಿತ್ರಪಕ್ಷ ಲೋಕ ಜನಶಕ್ತಿ ಪಕ್ಷವು (ಎಲ್ಜೆಪಿ) ಕೂಡಾ ಸುಪ್ರೀಂ ಕೋರ್ಟ್ನ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು "ಮೀಸಲಾತಿ ಸೌಲಭ್ಯ ಇರುವ ಸಮುದಾಯದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿಯೂ ಮೀಸಲು ದೊರೆಯುವುದನ್ನು ಖಾತರಿಪಡಿಸುವಂತಹ ಕ್ರಮವನ್ನು ಕೇಂದ್ರ ಸರ್ಕಾರವು ತಕ್ಷಣವೇ ಕೈಗೊಳ್ಳಬೇಕು. ಸುಪ್ರೀಂ ಕೋರ್ಟ್ನ ತೀರ್ಪು ಮೀಸಲಾತಿಯ ಪರಿಕಲ್ಪನೆಗೆ ವಿರುದ್ಧವಾಗಿದೆ. ಸಂವಿಧಾನವು ನೀಡಿರುವ ಮೀಸಲಾತಿಯನ್ನು ಮರುಸ್ಥಾಪನೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್' ಒತ್ತಾಯಿಸಿದ್ದಾರೆ.
ಈ ಕುರಿತಾಗಿ ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ ಮಾತನಾಡಿ, "ನಾವು ಗೌರವಪೂರ್ವಕವಾಗಿಯೇ ‘ಈ ತೀರ್ಪಿನ ವಿರುದ್ಧದ ಅತೃಪ್ತಿಯನ್ನು ಹೇಳುತ್ತೇವೆ. ಸರ್ಕಾರದಲ್ಲಿ ಮಹತ್ವದ ಹುದ್ದೆಯಲ್ಲಿ ಇರುವವರು ಈಗ ಮೀಸಲಾತಿಯನ್ನು ವಿರೋಧ ಮಾಡುತ್ತಿರುವುದು ದುರದೃಷ್ಟ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಉದಿತ್ ರಾಜ್ "ಮೀಸಲಾತಿ ವಿಚಾರದಲ್ಲಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಭಿನ್ನ ನಿಲುವು ಪ್ರತಿಪಾದನೆ ಮಾಡಿದರು. ಈ ನಿಟ್ಟಿನಲ್ಲಿ ಗೊಂದಲದ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು" ಎಂದು ಹೇಳಿದ್ದಾರೆ.
ಶುಕ್ರವಾರ ಸುಪ್ರೀಂ ಕೋರ್ಟ್ ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡಲೇಬೇಕೆಂದು ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡುವಾಗ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿತ್ತು. ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ ಎಂದು ತೀರ್ಪಿನಲ್ಲಿ ಹೇಳಿತ್ತು.