ಶಿಲ್ಲಾಂಗ್, ಫೆ 10 (Daijiworld News/MB) : ಪುಂಡಾಟಿಕೆ ಕುರಿತು ದೂರು ನೀಡಲು ಬಳಸಬಹುದಾದ ಆ್ಯಪ್ ಒಂದನ್ನು ನಾಲ್ಕನೇ ತರಗತಿ ಓದುತ್ತಿರುವ 9 ವರ್ಷದ ಬಾಲಕಿ ಮೀದೈಬಹುನ್ ಮಾಜಾವ್ ಅಭಿವೃದ್ಧಿಪಡಿಸಿದ್ದಾಳೆ.
ಈ ಕುರಿತು ಮಾತನಾಡಿದ ಬಾಲಕಿ ಮಾಜಾವ್, "ಪುಂಡರು ನನ್ನನ್ನು ಅಂಗನವಾಡಿ ಸಮಯದಿಂದಲೂ ಬೆದರಿಸುತ್ತಿದ್ದರು. ನಾನು ಇದನ್ನು ತೀವ್ರವಾಗಿ ದ್ವೇಷಿಸುತ್ತೇನೆ, ಹಾಗಾಗಿ ಸ್ವತಃ ಪರಿಹಾರ ಹುಡುಕಲು ಮಂದಾದೆ. ನನಗೆ ಆದ ಅನುಭವ ಬೇರೆ ಯಾವ ಮಕ್ಕಳಿಗೂ ಆಗಬಾರದು" ಎಂದು ಹೇಳಿದ್ದಾರೆ.
"ತಮ್ಮ ಗುರುತು ಬಹಿರಂಗಪಡಿಸಲು ಬಯಸದ ಸಂತ್ರಸ್ತರು ತಮ್ಮಗಾದ ಬೆದರಿಕೆಯ ಅನುಭವಗಳನ್ನು ಈ ಆ್ಯಪ್ ಮೂಲಕ ಶಿಕ್ಷಕರು, ಪೋಷಕರು ಹಾಗೂ ಸ್ನೇಹಿತರ ಜತೆ ಹಂಚಿಕೊಳ್ಳಬಹುದು. ಈ ಆಪ್ ಮೂಲಕ ಬೆದರಿಸಿದ ವ್ಯಕ್ತಿಗಳ ಹೆಸರು ಸೇರಿದಂತೆ ಘಟನೆಯ ವಿವರಗಳನ್ನು ಬಳಕೆದಾರರು ಸಂಬಂಧಪಟ್ಟ ವ್ಯಕ್ತಿಗಳಿಗೆ ರವಾನಿಸಬಹುದು. ಇದರಿಂದಾಗಿ ಆರೋಪಿಗಳ ಮೇಲೆ ಕ್ರಮತೆಗೆದುಕೊಳ್ಳುಲು ಅಧಿಕಾರಿಗಳಿಗೆ ನೆರವಾಗುತ್ತದೆ" ಎಂದು ಮಾಜಾವ್ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಲಕ್ಮೆನ್ ರಂಬುಯಿ ಅವರು ಬಾಲಕಿ ಆಪ್ ಅಭಿವೃದ್ಧಿ ಮಾಡಿರುವುದನ್ನು ಪ್ರಶಂಸಿದ್ದು, "ಬಾಲಕಿ ಜವಾಬ್ದಾರಿಯುತ ಪ್ರಜೆಯಾಗಲಿದ್ದಾಳೆ. ಸಾಮಾಜಿಕ ಪಿಡುಗುಗಳ ವಿರುದ್ಧವಾಗಿ ಆಕೆ ನಡೆಸುತ್ತಿರುವ ಹೋರಾಟಕ್ಕೆ ನಾನು ಶುಭ ಕೋರುತ್ತೇನೆ. ಆಕೆಗೆ ಮಾರ್ಗದರ್ಶನ ನೀಡುತ್ತಿರುವುದಕ್ಕೆ ಪೋಷಕರಿಗೂ ಅಭಿನಂದನೆ" ಎಂದಿದ್ದಾರೆ.
ಈ ಆಪ್ ಶೀಘ್ರವೇ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಾಗಲಿದೆ.