ನವದೆಹಲಿ, ಫೆ.10 (Daijiworld News/PY): ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ಕುರಿತಾಗಿರುವ ಕಾನೂನು ತೊಡಕುಗಳ ವಿಚಾರವಾಗಿ ವಿಸ್ತೃತ ಪೀಠದ ವಿಚಾರಣೆಗೆ ಅವಕಾಶ ಕಲ್ಪಿಸುವ ಕ್ರಮವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿಯಿತು.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ 9 ಸದಸ್ಯರ ನ್ಯಾಯಪೀಠವು, ತೀರ್ಪು ಮರುಪರಿಶೀಲಿಸುವ ಅಧಿಕಾರದೊಂದಿಗೆ, ಕಾನೂನು ತೊಡಕುಗಳನ್ನು ಪರಿಶೀಲಿಸುವಂತೆ ವಿಸ್ತೃತ ನ್ಯಾಯಪೀಠಕ್ಕೆ ಸೂಚಿಸುವ ಅಧಿಕಾರವೂ ಸುಪ್ರೀಂ ಕೋರ್ಟ್ಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಈ ವೇಳೆ ನ್ಯಾಯಪೀಠವು ಪರಿಶೀಲಿಸಬೇಕಾದ ವಿಷಯಗಳನ್ನೂ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಶಬರಿಮಲೆ ಪ್ರಕರಣದ ವಿಚಾರಣೆ ಫೆ.17ರಿಂದ ಪುನಃ ಆರಂಭವಾಗಲಿದ್ದು, ಇಬ್ಬರೂ ವಕೀಲರಿಗೆ ವಾದ ಮಂಡನೆಗೆ ತಲಾ ಒಂದು ದಿನಗಳ ಅವಕಾಶ ಸಿಗಲಿದೆ. ಪೂರಕ ವಾದಕ್ಕಾಗಿ ಎರಡು ತಾಸು ಸಮಯ ನೀಡಲಾಗುವುದು ಎಂದು ನ್ಯಾಯಪೀಠ ಪ್ರಕಟಿಸಿತು.
ವಿಸ್ತೃತ ನ್ಯಾಯಪೀಠವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಏಳು ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಸಂವಿಧಾನ ಹಾಗೂ ಶ್ರದ್ಧೆಗಳನ್ನಾಧರಿಸಿ ವಿಚಾರಣೆ ನಡೆಸಲಿದೆ ಎಂದು ನ್ಯಾಯಪೀಠ ತಿಳಿಸಿದೆ. ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ, ವೈಯಕ್ತಿಕ ಶ್ರದ್ಧೆ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಸಂಬಂಧಿಸಿದ ವಿಷಯಗಳೂ ಈ ಏಳು ಪ್ರಶ್ನೆಗಳಲ್ಲಿ ಸೇರಿದೆ.
ಸಂವಿಧಾನದ 25ನೇ ವಿಧಿಯ ಅನ್ವಯ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಿವಿಧ ಮತಶ್ರದ್ಧೆಗಳಿಗೆ ಸಂಬಂಧಿಸಿದ ವಿಚಾರಗಳನ್ನೂ ವಿಸ್ತೃತ ನ್ಯಾಯಪೀಠವು ಪರಿಶೀಲಿಸುತ್ತದೆ ಎಂದು ಬೋಬ್ಡೆ ನೇತೃತ್ವದ ನ್ಯಾಯಪೀಠವು ಘೋಷಿಸಿತು.
ಸಂವಿಧಾನದ 25 (2)(ಬಿ) ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ಹಿಂದೂ ಸಮುದಾಯಗಳು (ಸೆಕ್ಷನ್ಸ್ ಆಫ್ ಹಿಂದೂಸ್) ಪದಗುಚ್ಛದ ಅರ್ಥದೊಂದಿಗೆ ಧಾರ್ಮಿಕ ಆಚರಣೆಗಳ ವಿಚಾರವಾಗಿಯೂ ವಿಸ್ತೃತ ನ್ಯಾಯಪೀಠವು ನ್ಯಾಯಾಂಗ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿತು.
ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿರದ ವ್ಯಕ್ತಿಗೆ ಮತ್ತೊಂದು ಧರ್ಮದ ಆಚರಣೆಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸುವ ಅಧಿಕಾರವಿದೆಯೇ ಎಂಬ ವಿಚಾರವಾಗಿಯೂ ಸುಪ್ರೀಂ ಕೋರ್ಟ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ.