ಬೆಂಗಳೂರು, ಫೆ.10 (DaijiworldNews/PY): "ಆರ್ಎಸ್ಎಸ್ನವರಿಗೆ ಊಟ ಕೊಡೋಕೆ ನೀವು ಟಾಟಾ-ಬಿರ್ಲಾನಾ. ಸಂಘದವರಿಗೆ ನೀವು ಊಟ ಕೊಡುವ ಅವಶ್ಯಕತೆಯಿಲ್ಲ. ಅಂತಹ ಪರಿಸ್ಥಿತಿ ಬಂದಿಲ್ಲ. ಕಾಂಗ್ರೆಸ್ ಪಕ್ಷದವರು ನಿರ್ಗತಿಕರಾಗಿದ್ದಾರೆ. ಅವರಿಗೆ ಬೇಕಾದರೆ ಡಿಕೆಶಿ ಊಟ ನೀಡಲಿ" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, "ಡಿಕೆ.ಶಿವಕುಮಾರ್ ಅವರಿಗೆ ಕನಕಪುರವೂ ಎಲ್ಲಿ ತನ್ನ ಕೈಬಿಟ್ಟು ಹೋಗುತ್ತೋ ಎನ್ನುವ ಆತಂಕ. ಹೀಗಾಗಿ ಅವರು ಬಾಯಿ ಬಾಯಿ ಬಡೆದುಕೊಳ್ಳುತ್ತಿದ್ದಾರೆ" ಎಂದರು.
ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, "ಕಪಾಲ ಬೆಟ್ಟ ಪರಿಸರಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಅಲ್ಲಿನ ಪರಿಸರಕ್ಕೆ ತೊಂದರೆ ಆಗುವುದಿಲ್ಲ. ಅಲ್ಲಿ ಮುನೇಶ್ವರ ಮಂದಿರ ಇದೆ, ಡಿಕೆಶಿ ಮುನೇಶ್ವರ ಸ್ವಾಮಿಯ ಭಕ್ತರು. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ" ಎಂದು ಹೇಳಿದರು.
"ನನಗೆ ಕಂದಾಯ ಖಾತೆ ತೃಪ್ತಿ ತಂದಿದೆ. ಪ್ರಾಮಾಣಿಕವಾಗಿ ಕೊಟ್ಟ ಖಾತೆ ನಿಭಾಯಿಸುತ್ತಿದ್ದೇನೆ. ಮುಖ್ಯಮಂತ್ರಿಗಳು ಯಾರಿಗೆ ಯಾವ ಖಾತೆ ನೀಡುತ್ತಾರೆ ಎಂದು ತಿಳಿದಿಲ್ಲ" ಎಂದರು.
"ಕೊಡಗಿನಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಗೆ ಬ್ರೇಕ್ ಹಾಕಿದ್ದೆವು. ಇದೀಗ ಈ ನಿರ್ಧಾರವನ್ನು ವಾಪಸ್ ಪಡೆಯುವ ತೀರ್ಮಾನ ಮಾಡಿದ್ದೇವೆ. ಇದಕ್ಕೆ ಕೆಲವು ನಿಬಂಧನೆಗಳನ್ನು ಹೇರಲಾಗಿದೆ" ಎಂದು ಹೇಳಿದರು.
"ಮೀಸಲಾತಿ ಬಗ್ಗೆ ಸುಪ್ರೀಂ ತೀರ್ಪಿನ ಪ್ರತಿ ನೋಡಿಲ್ಲ. ಈ ವಿಚಾರವಾಗಿ ಖರ್ಗೆ ಪ್ರತಿಕ್ರಿಯೆ ಬಗ್ಗೆ ನೋಡಿದ್ದೇನೆ. ನಾನು ಮೀಸಲಾತಿ ಪರ ಇದ್ದೇನೆ. ಸುಪ್ರೀಂಕೋರ್ಟ್ ತೀರ್ಪು ನೋಡಿ ಪ್ರತಿಕ್ರಿಯಿಸುತ್ತೇನೆ" ಎಂದರು.