ನವದೆಹಲಿ, ಫೆ.10 (DaijiworldNews/PY): ಡಿಸಿಎಂ ಸ್ಥಾನ ಕೈತಪ್ಪಿದ ಕಾರಣ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ಫೆ.9 ಭಾನುವಾರದಂದು ಶ್ರೀರಾಮುಲು ಅವರು ದೆಹಲಿಗೆ ತೆರಳಿದ್ದು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ವಿಚಾರವಾಗಿ ಸೋಮವಾರ ಮಾತನಾಡಿದ ಅವರು, ನಾನು ಮಗಳ ವಿವಾಹದ ಆಹ್ವಾನ ನೀಡಲು ದೆಹಲಿಗೆ ಹೋಗಿದ್ದೆ. ಹಾಗೆಯೇ ಅಮಿತ್ ಶಾ ಅವರೊಂದಿಗೆ ಇತರ ಬಿಜೆಪಿ ನಾಯಕರನ್ನು ಭೇಟಿಯಾಗಿ ವಿವಾಹಕ್ಕೆ ಆಮಂತ್ರಿಸಿದ್ದೇನೆ. ಡಿಸಿಎಂ ಸ್ಥಾನದ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ.
ಅಮಿತ್ ಶಾ ಅವರೊಂದಿಗೆ ಹಲವಾರು ವಿಷಯಗಳ ವಿಚಾರವಾಗಿ ಚರ್ಚೆ ನಡೆಸಿರುವುದಾಗಿ ತಿಳಿಸಿದ ಶ್ರೀರಾಮುಲು ಅವರು, ರಾಜ್ಯ ರಾಜಕೀಯದ ಪರಿಸ್ಥಿತಿ, ಸರಕಾರದ ಆಡಳಿತ ಹಾಗೂ ನನ್ನ ಇಲಾಖೆಯ ವಿಚಾರವಾಗಿ ಚರ್ಚಿಸಿದ್ದೇನೆ. ಆದರೆ ಡಿಸಿಎಂ ಸ್ಥಾನದ ವಿಚಾರವಾಗಿ ಯಾವುದೇ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರು.
ಅಮಿತ್ ಶಾ ಅವರೊಂದಿಗಿನ ರಾಜಕೀಯ ಮಾತುಕತೆ ವಿಚಾರವನ್ನು ಹೇಳಿಕೊಳ್ಳದ ಶ್ರೀರಾಮುಲು ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಶ್ರೀರಾಮುಲು ಅರು ಡಿಸಿಎಂ ಆಕಾಂಕ್ಷಿಯಾಗಿದ್ದು ಸಿಎಂ ಬಿಎಸ್ವೈ ಅವರೊಂದಿಗೂ ಸಾಕಷ್ಟು ಲಾಬಿ ನಡೆಸಿದ್ದರು. ಅಲ್ಲದೇ ಭಾನುವಾರ ದಾವಣಗೆರೆಯ ವಾಲ್ಮೀಕಿ ಜಾತ್ರೆಯ ವೇದಿಕೆಯಲ್ಲಿಯೂ ಸಿಎಂ ಬಿಎಸ್ವೈ ಅವರೊಂದಿಗೆ ಶ್ರೀರಾಮುಲು ಕಾಣಿಸಿಕೊಳ್ಳದಿದ್ದಿದ್ದು ಚರ್ಚೆಗೆ ಗ್ರಾಸವಾಗಿದೆ.