ವಿಜಯಪುರ, ಫೆ.10 (DaijiworldNews/PY): "ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಶಾಸಕ ಸ್ಥಾನ ತ್ಯಾಗ ಮಾಡಿ ಪುನಃ ಗೆದ್ದ ಎಲ್ಲಾ ಅರ್ಹ ಶಾಸಕರಲ್ಲಿ ಮಹೇಶ ಕುಮಟಳ್ಳಿ ಅವರನ್ನು ಕಡೆಗಣಿಸಿ ಎಲ್ಲರನ್ನು ಮಂತ್ರಿ ಮಾಡಿದ್ದೀರಿ. ಕುಮಟಳ್ಳಿ ಅವರನ್ನು ಕಡೆಗಣಿಸಿದ್ದು ಯಾಕೆ" ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶಾಸಕ ಸ್ಥಾನ ತ್ಯಾಗ ಮಾಡಿ ಮತ್ತೆ ಗೆದ್ದಿರುವ ಎಲ್ಲಾ ಅರ್ಹ ಶಾಸಕರಲ್ಲಿ ಮಹೇಶ ಕುಮಟಳ್ಳಿ ಹೊರತಾಗಿ ಎಲ್ಲರನ್ನೂ ಮಂತ್ರಿ ಮಾಡಿದ್ದೀರಿ.ಈಗಾಗಲೇ ಬೆಳಗಾವಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮತ್ತೆ ಕೆಲವರಿಗೆ ನೂರಕ್ಕೆ ನೂರರಷ್ಟು ಮಂತ್ರಿ ಮಾಡುವ ಭರವಸೆ ನೀಡಲಾಗುತ್ತಿದೆ. ಮುಂಬೈ ಕರ್ನಾಟಕ ವಿಜಯಪುರ ಜಿಲ್ಲೆ, ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಇದರಿಂದಾಗಿ ಪ್ರಾದೇಶಿಕ ಅಸಮಾನತೆ ಹೆಚ್ಚಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಮತ್ತೊಬ್ಬ ಶಾಸಕರನ್ನು ನೂರಕ್ಕೆ ನೂರರಷ್ಟು ಮಂತ್ರಿ ಮಾಡುವ ಭರವಸೆ ನೀಡುವುದು ಎಷ್ಡು ಸರಿ" ಎಂದು ಕೇಳಿದರು.
"ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ಜೊತೆಗೆ ಬಜೆಟ್ ನಲ್ಲಿ ಎಲ್ಲ ಶಾಸಕರಿಗೂ ಸಮಾನ ಅನುದಾನ ನೀಡಬೇಕು. ಬರುವ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕಾಂಗ ಸಭೆ ಕರೆದು ಶಾಸಕರ ಭಾವನೆ ಅರಿಯಬೇಕು. ಈಗಾಗಲೇ ಗೆದ್ದ ಅರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ" ಎಂದು ತಿಳಿಸಿದರು.