ಬೆಂಗಳೂರು, ಫೆ.10 (DaijiworldNews/PY): ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪದಡಿ ಬೆಳ್ಳಂದೂರು ವ್ಯಾಪ್ತಿಯ ಜೋಪಡಿಗಳನ್ನು ನೆಲಸಮ ಮಾಡಿದ ಪ್ರಕರಣ ಹಿನ್ನೆಲೆ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಮುಂದಿನ 30 ದಿನಗಳಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದರ ಜೊತೆಗೆ ಮಧ್ಯಂತರ ಪರಿಹಾರವಾಗಿ ಎರಡು ವಾರಗಳಲ್ಲಿ ಆ ನಿರಾಶ್ರಿತರಿಗೆ ಹಣಕಾಸು ಮತ್ತು ಇನ್ನಿತರ ನೆರವು ನೀಡುವ ಕುರಿತು ಸರಕಾರ ಪ್ರಮಾಣ ಪತ್ರ ಸಲ್ಲಿಸಬೇಕು ಎಂದೂ ಹೈಕೋರ್ಟ್ ಸೂಚಿಸಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿದೆ.
ಬೆಂಗಳೂರಿನ ದೇವರಬೀಸನಹಳ್ಳಿಯ ಕರಿಯಮ್ಮನ ಅಗ್ರಹಾರ ಪ್ರದೇಶದಲ್ಲಿ ಬಡವರು ಕಟ್ಟಿಕೊಂಡಿದ್ದ ಜೋಪಡಿಗಳನ್ನು ಜನವರಿ 19 ರಂದು ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿದ್ದರು. ಇದರಿಂದ ಇಲ್ಲಿ ವಾಸವಾಗಿದ್ದ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ನಿವಾಸಿಗಳು ನಿರಾಶ್ರಿತರಾಗಿದ್ದರು.
ಅಧಿಕಾರಿಗಳ ಕ್ರಮ ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ಆ ಸಂದರ್ಭ ಈ ಬಗ್ಗೆ ಕೂಲಂಕಷ ಪ್ರಮಾಣ ಪತ್ರ ಸಲ್ಲಿಸಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.