ಶಿವಮೊಗ್ಗ, ಫೆ.10 (DaijiworldNews/PY): "ಬಜೆಟ್ ಅಧಿವೇಶನದ ಬಳಿಕ ವಿವಿಧ ಮಂಡಳಿ ಹಾಗೂ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು" ಎಂದು ಸಿಎಂ ಬಿಎಸ್ವೈ ಅವರು ಸೋಮವಾರ ಹೇಳಿದ್ದಾರೆ.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾ.5 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಇತರ ಹಿರಿಯ ಶಾಸಕರಿಗೆ ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನಗಳನ್ನು ನೀಡಲಾಗುವುದು.ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರನ್ನು ತಕ್ಷಣವೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು"ಎಂದರು.
"ಜೇಷ್ಠತೆಯ ಆಧಾರದ ಮೇಲೆ ಉಮೇಶ್ ಕತ್ತಿ ಅವರು ಸಚಿವರಾಗಲು ಅರ್ಹರಾಗಿದ್ದರೂ, ರಾಜಕೀಯ ಅನಿವಾರ್ಯತೆಯಿಂದಾಗಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಹಿರಿಯ ಸಚಿವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ-ಮಾನ ನೀಡಲಾಗುವುದು. ಜ್ಞಾನೇಂದ್ರ ಅವರಂತಹ ಅನೇಕ ಹಿರಿಯ ಹಾಗೂ ಅರ್ಹ ಶಾಸಕರು ಸಚಿವರಾಗಲು ಸಾಧ್ಯವಾಗಿಲ್ಲ" ಎಂದರು.
"ಹಿರಿಯ ಶಾಸಕರು ಹಾಗೂ ಬಿಜೆಪಿಗೆ ಹೊಸದಾಗಿ ಸೇರ್ಪಡೆಯಾದವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಲ್ಲದೆ, ಹೊಸಬರನ್ನು ಪಕ್ಷಕ್ಕ ಸೇರಿಸಿಕೊಳ್ಳಲು ಕಾರಣವಾಗಿರುವ ರಾಜಕೀಯ ಅನಿವಾರ್ಯತೆಯ ಬಗ್ಗೆ ಹಿರಿಯ ನಾಯಕರಿಗೆ ಗೊತ್ತಿದೆ" ಎಂದು ಹೇಳಿದರು.