ನವದೆಹಲಿ, ಫೆ 10 (DaijiworldNews/SM): ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಫೆಬ್ರವರಿ 11ರ ಮಂಗಳವಾರ ಹೊರಬೀಳಲಿದೆ. ಆ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಯಾರು ಗದ್ದುಗೆ ಏರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ಮಂಗಳವಾರ ಬೆಳಗ್ಗೆ ಎಂಟು ಗಂಟೆಯಿಂದ 70 ಸದಸ್ಯ ಬಲ ಹೊಂದಿರುವ ದೆಹಲಿಯ ವಿಧಾನಸಭಾ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಮಧ್ಯಾಹ್ನದ ವೇಳೆಗೆ ಚುನಾವಣಾ ಫಲಿತಾಂಶದ ಸ್ಫಷ್ಟ ಚಿತ್ರಣ ಹೊರಬೀಳಲಿದೆ.
ಚುನಾವಣೋತ್ತರ ಸಮೀಕ್ಷೆಯಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷಕ್ಕೆ ಮೇಲುಗೈ ಸಾಧಿಸುವ ಸಾಧ್ಯತೆಯನ್ನು ಉಲ್ಲೇಖಿಸಲಾಗಿದೆ. ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಗೊಳ್ಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. ಆದರೆ, ಇದರಂತೆ ಫಲಿತಾಂಶ ಬರತ್ತದೆ ಎಂಬುವುದು ಹೇಳಲಸಾಧ್ಯ.
2015ರ ಚುನಾವಣಾ ಫಲಿತಾಂಶಕ್ಕಿಂತ ಆಮ್ ಆದ್ಮಿ ಪಕ್ಷಕ್ಕೆ ಸಿಕ್ಕಿದ ಸ್ಥಾನಕ್ಕಿಂತ ಕಡಿಮೆ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಬಿಜೆಪಿ ಒಂದಿಷ್ಟು ಹೆಚ್ಚಿನ ಸ್ಥಾನಗಳಿಸುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಮತ್ತಷ್ಟು ಕುಸಿಯಲಿದೆ ಎನ್ನಲಾಗಿದೆ.