ಶಿವಮೊಗ್ಗ, ಫೆ.11 (DaijiworldNews/PY): ಬೀರೂರು-ಶಿವಮೊಗ್ಗ-ತಾಳಗುಪ್ಪ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಬೇಕು ಎಂಬ ಒತ್ತಾಸೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, 2020-21ನೇ ಸಾಲಿನ ಬಜೆಟ್ನಲ್ಲಿ ವಿದ್ಯುದ್ದೀಕರಣ ಕಾಮಗಾರಿಗಾಗಿ 25 ಕೋಟಿ ರೂ.ಗಳನ್ನು ಘೋಷಿಸಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಸಂಸದನಾದ ನಂತರ ಶಿವಮೊಗ್ಗಕ್ಕೆ ಹಲವು ರೈಲುಗಳನ್ನು ತರಲು ಶ್ರಮ ವಹಿಸಲಾಗಿತ್ತು. ಅದರ ಪರಿಣಾಮವಾಗಿ ಹಲವು ರೈಲುಗಳು ಲಭ್ಯವಾಗಿವೆ. ಮಲೆನಾಡಿನೊಂದಿಗೆ ಮಧ್ಯ ಹಾಗೂ ಉತ್ತರ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸುವ ಪ್ರಯತ್ನದಲ್ಲೂ ಯಶಸ್ವಿಯಾಗಿದೆ. ಇದರ ಪರಿಣಾಮ ಈಗಾಗಲೇ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಮತ್ತು ಶಿವಮೊಗ್ಗ-ಹರಿಹರ ನೂತನ ರೈಲು ಮಾರ್ಗಗಳು ಮಂಜೂರು ಆಗಿದ್ದು ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ ಎಂದು ಹೇಳಿದರು.
ಬೀರೂರು-ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದ ವಿದ್ಯುದ್ದೀಕರಣ ಯೋಜನೆಗೆ ಕೇಂದ್ರ ಸರ್ಕಾರವು ಹಣ ಮಂಜೂರು ಮಾಡಿದೆ. ಇದರಿಂದ ಈ ಭಾಗದ ರೈಲುಗಳು ವಿದ್ಯುತ್ ಎಂಜಿನ್ಗಳ ಸಹಾಯದಿಂದ ಚಲಿಸಲಿವೆ. ಇದರಿಂದ ರೈಲುಗಳ ವೇಗ ಹೆಚ್ಚಾಗಲಿದ್ದು, ಮಾಲಿನ್ಯ ರಹಿತ ರೈಲು ಸಂಚಾರಕ್ಕೆ ಪ್ರಯೋಜನವಾಗಲಿದೆ ಎಂದರು.
ಪ್ರಧಾನಿ ಮೋದಿ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಇದಕ್ಕೆ ಸಹಕರಿಸಿದ ಸಿಎಂ ಬಿಎಸ್ವೈ, ರೈಲ್ವೆ ಸಚಿವರಾದ ಪಿಯುಶ್ ಗೋಯಲ್, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಧನ್ಯವಾದ ತಿಳಿಸಿದ್ದಾರೆ.