ನವದೆಹಲಿ, ಫೆ.11 (DaijiworldNews/PY): "ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ಕೊನೆಗೂ ಜನರ ಪರವಾಗಿ ಕೆಲಸ ಮಾಡುವುದೇ ನಿಜವಾದ ರಾಷ್ಟ್ರೀಯತೆ ಎಂಬುದನ್ನು ಸಾಬೀತುಪಡಿಸಿದೆ" ಎಂದು ಆಮ್ ಆದ್ಮಿ ಪಕ್ಷ ನಾಯಕ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಈ ಮಧ್ಯೆ ಮಾತನಾಡಿದ ಮನೀಶ್ ಸಿಸೋಡಿಯಾ ಅವರು, "ರಾಜಕೀಯವಾಗಿ ಅವಕಾಶ ಸಿಕ್ಕರೆ ಜನರ ಪರವಾಗಿ ಕೆಲಸ ಮಾಡಬೇಕು. ಶಿಕ್ಷಣ, ವೈದ್ಯಕೀಯ ಸೇರಿದಂತೆ ಜನರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಪಡಿಸಬೇಕು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ಕೊನೆಗೂ ಜನರ ಪರವಾಗಿ ಕೆಲಸ ಮಾಡುವುದೇ ನಿಜವಾದ ರಾಷ್ಟ್ರೀಯತೆ ಎಂಬುದನ್ನು ಸಾಬೀತುಪಡಿಸಿದೆ" ಎಂದರು.
"ನಾವು ಕಳೆದ 5 ವರ್ಷಗಳಲ್ಲಿ ಇದೇ ರೀತಿಯಾದ ಕೆಲಸ ಮಾಡುತ್ತಿದ್ದೇವೆ. ದೆಹಲಿಯಲ್ಲಿ ನಾವು ಶಾಲೆ, ಆಸ್ಪತ್ರೆಗಳ ಅಭಿವೃದ್ದಿಗಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ, ವಾತಾವರಣವನ್ನು ಹದಗೆಡಿಸಲು ಹಿಂದೂ-ಮುಸ್ಲಿಂ ವಿಷಯದ ಕುರಿತಾದ ಚರ್ಚೆಯನ್ನು ಹರಡಲಾಯಿತು. ಕೊನೆಗೂ ಸರ್ಕಾರೊಂದು ಪ್ರಾಮಾಣಿಕ ಕೆಲಸ ಮಾಡಿದರೆ ಗೆಲುವು ಸಾಧಿಸುವುದು ಕಷ್ಟವಲ್ಲ ಎಂಬುದನ್ನು ದೆಹಲಿ ಫಲಿತಾಂಶ ದೃಢಪಡಿಸಿದೆ" ಎಂದು ಹೇಳಿದರು.
"ಸಿಎಎ ವಿರುದ್ದ ಶಾಹೀನ್ಬಾಗ್ನಲ್ಲಿ ನಡೆದ ಪ್ರತಿಭಟನೆಗಳ ಸುತ್ತ ರಾಷ್ಟ್ರ ವಿರೋಧಿ ನಿರೂಪಣೆಯನ್ನು ರೂಪಿಸುವ ಮುಖಾಂತರ ದೆಹಲಿಯ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬುದಾಗಿ ಈ ಹಿಂದೆಯೇ ಆಮ್ ಆದ್ಮಿ ಹೇಳಿತ್ತು" ಎಂದರು.
"ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ತಮ್ಮ ಆಬಿಯಾನವನ್ನು ಸಿಎಎ ವಿರೋಧಿಸುವವರ ಮೇಲಿನ ದಾಳಿಗೆ ಮೀಸಲಿಟ್ಟರು. ಅಲ್ಲದೇ ಅವರನ್ನು ದೇಶದ್ರೋಹಿಗಳು ಎಂದು ಕರೆದಿದ್ದಾರೆ. ಕಳೆದು 5 ವರ್ಷಗಳಲ್ಲಿ ದೆಹಲಿ ಸರ್ಕಾರ ಮಾಡಿರುವ ಅಭಿವೃದ್ದಿ ಕಾರ್ಯದಿಂದ ಸಂಪೂರ್ಣವಾಗಿ ಜಯ ಸಾಧಿಸುತ್ತದೆ" ಎಂದು ಎಎಪಿ ಹೇಳಿಕೊಂಡಿತ್ತು.
ಫೆ.8ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಮಂಗಳವಾರ ಮತ ಎಣಿಕೆ ಆರಂಭವಾದ ಮೊದಲ 1 ಗಂಟೆಯ ಅವಧಿಯಲ್ಲೇ ಸುಮಾರು 50 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಆಮ್ ಆದ್ಮಿ ಮತ್ತೊಮ್ಮೆ ದೆಹಲಿ ಗದ್ದುಗೆಗೆ ಏರುವುದು ಬಹುತೇಕ ಖಚಿತವಾಗಿದೆ.