ಬಾಗಲಕೋಟೆ, ಫೆ.11 (DaijiworldNews/PY): "ದೆಹಲಿ ಕೇಂದ್ರಾಡಳಿತ ಪ್ರದೇಶಕ್ಕೆ ಮಾತ್ರ ಸೀಮಿತ. ದೆಹಲಿ ಚುನಾವಣೆಯು ನಗರಸಭೆ, ಮಹಾನಗರ ಪಾಲಿಕೆ ಚುನಾವಣೆಯಂತೆ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಂಗಳವಾರ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, "ದೆಹಲಿ ಆಡಳಿತ ಬಾಗಲಕೋಟೆ ನಗರಸಭೆ ಆಡಳಿತಕ್ಕೆ ಮಾತ್ರ ಸೀಮಿತ. ಇನ್ನು ದೆಹಲಿ ಚುನಾವಣೆಯು ನಗರಸಭೆ, ಮಹಾನಗರ ಪಾಲಿಕೆ ಚುನಾವಣೆಯಂತೆ. ರಾಷ್ಟ್ರ ರಾಜಕಾರಣಕ್ಕೂ, ದೆಹಲಿ ರಾಜಕಾರಣಕ್ಕೂ ಸಂಬಂಧ ಇಲ್ಲ. ದೆಹಲಿ ಕೇಂದ್ರಾಡಳಿತ ಪ್ರದೇಶಕ್ಕೆ ಮಾತ್ರ ಸೀಮಿತ. ದೇಶದಲ್ಲಿ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕಾಣಿಸುತ್ತಿಲ್ಲವೇ" ಎಂದರು.
"ಎಎಪಿ ಪಕ್ಷವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿದೆ. ಟ್ಯಾಕ್ಸ್ ಫ್ರೀ, ಬಸ್ ಫ್ರೀ, ವಿದ್ಯುತ್, ರೈಲ್ವೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದಾರೆ. ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು. ಎಎಪಿ 5 ವರ್ಷ ಆಡಳಿತ ನಡೆಸಿದೆ.ಪುನಃ ಅಧಿಕಾರಕ್ಕೆ ಬರಬೇಕು ಎನ್ನು ಉದ್ದೇಶದಿಂದ ಏನೇನೋ ಗಿಮಿಕ್ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಚುನಾವಣೆ ಹೋಗುವ ವೇಳೆ ಈ ರೀತಿಯಾಗಿ ಜನರಿಗೆ ಮೋಸ ಮಾಡುವುದು ಕೆಲವೆಡೆ ಆಗುತ್ತಿದೆ. ಮಮತಾ ಬ್ಯಾನರ್ಜಿ ಕೂಡಾ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ ಎಂದು ಕೇಳಿದ್ದೆ. ಬಿಜೆಪಿಗೆ ಹಿನ್ನಡೆ ಏನಲ್ಲ. ನಮ್ಮದೇನು ರಾಜ್ಯವಲ್ಲ ಹಾಗೂ ನಾವೇನು ಕಳೆದುಕೊಂಡಿಲ್ಲ. ಈ ಹಿಂದೆಯೂ ಎಎಪಿ ಆಡಳಿತ ನಡೆಸಿದೆ. ಈಗ ಪುನಃ ಎಎಪಿ ಅಧಿಕಾರಕ್ಕೆ ಬರುತ್ತದೆ ಎಂಬ ಸಮೀಕ್ಷೆಯಿದೆ" ಎಂದರು.
"ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ಕೇಜ್ರಿವಾಲ್ ಬಹಳ ದೊಡ್ಡ ಆಡಳಿತ ಮಾಡಿದರೆ ನಾವು ದೆಹಲಿಯಲ್ಲಿ ಏಳು ಲೋಕಸಭಾ ಕ್ಷೇತ್ರ ಗೆದ್ದಿದ್ಧೇವೆ. ದೇಶದ ಜನತೆ ಬಹಳ ಬುದ್ದಿವಂತರಿದ್ದಾರೆ. ದೇಶಕ್ಕೆ ಸುಭದ್ರ ಸರ್ಕಾರ, ಸುರಕ್ಷಿತಕ್ಕಾಗಿ ಯಾರಿಗೆ ಕೊಡಬೇಕೆಂದು ನಿರ್ಧರಿಸುತ್ತಾರೆ" ಎಂದು ಹೇಳಿದರು.
"ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಮಿತಿ ಮೀರಿ ಹೆಚ್ಚಾಗಿ ಸಾಲ ಮಾಡಿದ್ದರು. ಆಗಲೇ ದರಿದ್ರತನ ಪ್ರಾರಂಭವಾಗಿದೆ. ಅತೀ ಹೆಚ್ಚು ಸಾಲ ಮಾಡಿದ್ದು ಸಿದ್ದರಾಮಯ್ಯ. ಅವರು ಹೇಳಿದಂತೆ ಸರ್ಕಾರದಲ್ಲಿ ತೊಂದರೆ ಆಗಿಲ್ಲ. ಪ್ರಕೃತಿ ವಿಕೋಪದಿಂದ 35 ಸಾವಿರ ಕೋಟಿ ನಷ್ಠವಾಯಿತು. ಹೀಗಾಗಿ ಸ್ವಲ್ಪ ಆರ್ಥಿಕ ತೊಂದರೆ ಆಗಿದೆ. ಪ್ರಕೃತಿ ವಿಕೋಪದಲ್ಲಿ ಮನೆ, ಬೆಳೆ, ಸಾರ್ವಜನಿಕ ಆಸ್ತಿ-ಪಾಸ್ತಿ ಪರಿಹಾರ ಕೊಟ್ಟಿದ್ದೇವೆ. ನೆರೆ ಸಂತ್ರಸ್ತರಿಗೆ ಸರ್ಕಾರ ಕನಿಷ್ಠ 10 ಸಾವಿರ ಕೋಟಿ ಪರಿಹಾರ ಕೊಟ್ಟಿದೆ" ಎಂದರು.
"ಮಹೇಶ್ ಕುಮಟಳ್ಳಿ ಎಂಎಸ್ ಐಎಲ್ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ ವಿಚಾರವಾಗಿ ಮಾತನಾಡಿದ ಅವರು, ಕುಮಟಳ್ಳಿ ಏನು ಹೇಳಿದ್ದಾರೆ ಅಂತ ನನಗೆ ತಿಳಿದಿಲ್ಲ. ಈಗಂತೂ ಸಚಿವ ಸಂಪುಟ ವಿಸ್ತರಣೆ ಆಗಿದೆ. ಇನ್ನು 6 ಹುದ್ದೆ ಖಾಲಿ ಇವೆ. ಮುಂದಿನ ದಿನಗಳಲ್ಲಿ ವಿಸ್ತರಣೆ ಆಗುತ್ತೆ" ಎಂದರು.
ಲೋಕೋಪಯೋಗಿ ಖಾತೆಯ ಮೇಲೆ ಯಾರು ಕಣ್ಣಿಟ್ಟಿದ್ದಾರೋ, ಯಾರು ಇಟ್ಟಿಲ್ಲವೋ ನನಗೆ ತಿಳಿದಿಲ್ಲ. ನಾನು ಯಾವಾಗಲೂ ಹೇಳುತ್ತಾ ಬಂದಿದ್ದೇನೆ ಪಕ್ಷ ಹಾಗೂ ಸಿಎಂ ಏನು ಜವಾಬ್ದಾರಿ ಕೊಡುತ್ತಾರೆ ಅದನ್ನು ನಾನು ಮಾಡುತ್ತೇನೆ" ಎಂದು ತಿಳಿಸಿದರು.