ನವದೆಹಲಿ, ಫೆ.11 (DaijiworldNews/PY): ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಕಂಡು ಖುಷಿಗೊಂಡಿರುವ ನಟ, ರಾಜಕಾರಣಿ ಪ್ರಕಾಶ್ ರೈ, ಇದು ಬಿಜೆಪಿಗೆ ಜನರು ಕೊಟ್ಟಿರುವ ಪೊರಕೆ ಏಟು ಎಂದು ಹೇಳಿದ್ದಾರೆ.
ದೆಹಲಿ ಚುನಾವಣಾ ಪ್ರಚಾರದ ಸಂದರ್ಭ ಕೇಂದ್ರ ಸಚಿವ ಅನುರಾಗ್ ಠಾಕೂರ್, ಪ್ರತಿಭಟನಾಕಾರರಿಗೆ ಗುಂಡುಹೊಡೆಯಬೇಕು ಎಂದು ಹೇಳಿದ್ದರು. ಇದನ್ನು ಬಳಸಿಕೊಂಡ ಪ್ರಕಾಶ್ ರೈ ಆ ಹೇಳಿಕೆಗೆ ತಿರುಗೇಟು ನೀಡಿದ್ದು, ದೆಹಲಿ ಫಲಿತಾಂಶವು ರಾಜಧಾನಿಯಲ್ಲಿ ಬಿಜೆಪಿಗೆ ನೀಡಿದ ಗಲ್ಲುಶಿಕ್ಷೆ ಎಂಬ ಎರಡು ಅರ್ಥದ ಪದವನ್ನು ಬಳಸಿರುವ ಅವರು, ಗುಂಡು ಹಾರಿಸಿ ಎಂದು ಕರೆ ನೀಡಿದವರಿಗೆ ಜನರು ಶಾಕ್ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತನ್ನ ಟ್ವಿಟರ್ ಖಾತೆಯಲ್ಲಿ ಕ್ಯಾಪಿಟಲ್ ಫನಿಶ್ಮೆಂಟ್ ಎಂದು ಚುನಾವಣಾ ಫಲಿತಾಂಶವನ್ನು ಬಿಜೆಪಿಗೆ ಅನ್ವಯಿಸಿರುವ ಪ್ರಕಾಶ್ ರೈ ಅವರು, ಗೋಲಿಬಾರ್ ಮಾಡೋರಿಗೆ ಜನ ಪೊರಕೇಲಿ ಹೊಡುದ್ರು... ಶಾಕ್ ಹೊಡೀತಾ? ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಚುನಾವಣೆ ವಿಚಾರದಲ್ಲಿ ಪ್ರಕಾಶ್ ರೈ, ಬಿಜೆಪಿಯನ್ನು ವಿರೋಧಿಸುತ್ತಾ ಎಎಪಿಯನ್ನು ಬೆಂಬಲಿಸಿದ್ದರು. ಕೆಲಸ ಬೇಕೋ ಅಥವಾ ಸುಳ್ಳುಗಳು ಬೇಕೋ? ಜನರ ಮಗನೋ ಅಥವಾ ಬಂದೂಕಿನ ಮಗನೋ? ನಾಗರಿಕರು ನಾಳೆ ಯಾವುದು ಎಂದು ತೀರ್ಮಾನಿಸುತ್ತಾರೆ ಎಂದು ಚುನಾವಣೆಯ ಹಿಂದಿನ ದಿನ ಟ್ವೀಟ್ ಮಾಡಿದ್ದರು.