ನವದೆಹಲಿ, ಫೆ.11 (DaijiworldNews/PY): ದೇಶದ ಆರ್ಥಿಕತೆ ಕುಸಿಯುತ್ತಿಲ್ಲ, ಬದಲಾಗಿ 5 ಟ್ರಿಲಿಯನ್ ಡಾಲರ್ನತ್ತ ಸಾಗುತ್ತಿದ್ದು ಆರ್ಥಿಕವಾಗಿ ಚಿಗುರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಬೇಕೆಂದು ಕೇಂದ್ರ ಎನ್ ಡಿಎ ಸರ್ಕಾರ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇನ್ನು ನಾಲ್ಕೈದು ವರ್ಷಗಳಲ್ಲಿ ಖಂಡಿತವಾಗಿಯೂ ನಮ್ಮ ಗುರಿ ತಲುಪುತ್ತೇವೆ ಎಂದು ಎನ್ ಡಿಎ ನಾಯಕರು ಹೇಳುತ್ತಲೇ ಬಂದಿದ್ದಾರೆ ಎಂದರು
ಈ ವಿಚಾರವಾಗಿ ಟೀಕಿಸುವ ವಿಪಕ್ಷ ನಾಯಕರು, ದೇಶದ ಆರ್ಥಿಕ ಸ್ಥಿತಿ ಕುಸಿದಿದೆ, ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ, ಉತ್ಪಾದನೆ ಕುಂಠಿತವಾಗಿದೆ, ಇಷ್ಟೆಲ್ಲ ಸಮಸ್ಯೆಗಳ ನಡುವೆ 5 ಟ್ರಿಲಿಯನ್ ಡಾಲರ್ ಮುಟ್ಟುವುದು ಹೇಗೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆಲ್ಲಾ ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವಿದೇಶಿ ನೇರ ಹೂಡಿಕೆ ಹೆಚ್ಚಿಸುವುದು, ಕಾರ್ಖಾನೆಗಳ ಉತ್ಪಾದನೆಯಲ್ಲಿ ಏರಿಕೆ, ಕಳೆದ ಮೂರು ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಜಿಎಸ್ಟಿ ಸಂಗ್ರಹವಾಗಿರುವುದು ನೋಡಿದರೆ ಆರ್ಥಿಕವಾಗಿ ಪ್ರಗತಿ ಹೊಂದುತ್ತಿದ್ದೇವೆ ಎಂದು ಸೂಚಿಸುತ್ತದೆ ಎಂದು ಹೇಳಿದರು.