ಬೆಂಗಳೂರು, ಫೆ.11 (DaijiworldNews/PY): 2023ರಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದೇನೆ. ನಾನು ಹೋರಾಟ ಮಾಡುತ್ತೇನೆ, ನನಗೆ ವಯಸ್ಸು 82 ಇರಬಹುದು, ಆದರೆ ಆ ವಯಸ್ಸು ನನಗೆ ಯಾವುದೇ ಅಡ್ಡಿ ಆಗಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೋಸ್ಕರ ಯಾರಿ ಸಾಯುತ್ತೇನೆ ಅನ್ನುತ್ತಾನೋ ಅಂತವರನ್ನು ತಂದು ಪಕ್ಷಕ್ಕೆ ಕಟ್ಟುತ್ತೇನೆ. ನಾನು ಹೋರಾಟ ಮಾಡುತ್ತೇನೆ. ನನ್ನ ವಯಸ್ಸು 82 ಆಗಿರಬಹುದು. ಆ ವಯಸ್ಸು ನನಗೆ ಅಡ್ಡಿಯಾಗುವುದಿಲ್ಲ. 2023ರಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದೇನೆ. ಅದಕ್ಕಾಗಿ ಹೋರಾಟ ಮಾಡಲು ಸಿದ್ದ ಎಂದು ಹೇಳಿದರು.
ಸದ್ಯ ಜನತಾ ಪರಿವಾರದ ಹಲವು ನಾಯಕರು ಬೇರೆ ಬೇರೆ ಪಕ್ಷಗಳಲ್ಲಿದ್ದಾರೆ. ಅವರೆನ್ನಲ್ಲಾ ಒಗ್ಗೂಡಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಕೆಲ ರಾಷ್ಟ್ರೀಯ ನಾಯಕರು ನನ್ನನ್ನು ಸಂಪರ್ಕಿಸಿದ್ದು, ಒಗ್ಗೂಡುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಸಮಯಾವಕಾಶ ಬೇಕು. ಡಿಸೆಂಬರ್ 2020ರೊಳಗೆ ನಮ್ಮ ಪಕ್ಷಕ್ಕೆ ಯಾರೆಲ್ಲಾ ಬರುತ್ತಾರೆ ಅವರೆನ್ನೆಲ್ಲಾ ಒಗ್ಗೂಡಿಸಲು ಯತ್ನಿಸಲಾಗುತ್ತದೆ. ಜನತಾ ಪರಿವಾರದಲ್ಲಿದ್ದ ಹಲವು ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸುವಂತೆ ನನಗೆ ಸಲಹೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಅನೇಕ ಜನ ನನ್ನ ಸ್ನೇಹಿತರಿದ್ದಾರೆ. ಅವರ್ಯಾರಿಗೂ ಕೂಡ ಆ ಎರಡು ಪಕ್ಷದಲ್ಲಿ ಇರೋಕೆ ಇಷ್ಟ ಇಲ್ಲ. ಆದರೆ ಕೆಲವು ಅಧಿಕಾರಶಾಹಿಗಳಿಗೆ ಹೆದರಿ ಆ ಪಕ್ಷದಲ್ಲಿ ಇದ್ದಾರೆ. ಇದು ತಮಾಷೆಯ ಮಾತಲ್ಲ. ನನ್ನ ಜೊತೆ ಅವರು ಹಂಚಿಕೊಂಡಿರುವ ಅಭಿಪ್ರಾಯವನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಪಕ್ಷದ ಸಂಘಟನೆಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ. ಯಾರಿಗೂ ಹೆದರುವ ಅಗತ್ಯ ಇಲ್ಲ. ಮಂತ್ರಿಗಳಿಗೆ, ಪೊಲೀಸರಿಗೆ ಹೆದರುವ ಅಗತ್ಯ ಇಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಕೈ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ 45,000 ಮಹಿಳೆಯರನ್ನು ಒಟ್ಟುಗೂಡಿಸಿ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಮಾಡಲಿದ್ದೇವೆ ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದವರು. ಮೊದಲ ಬಾರಿ ಅಧಿಕಾರ ಕಳೆದುಕೊಂಡರು. ಎರಡನೇ ಬಾರಿ ಅಧಿಕಾರ ಪಡೆದರು. ಅವರ ನಿರಂತರ ಹೋರಾಟ ಪರಿಶ್ರಮದಿಂದ ಇವತ್ತು ಎಎಪಿ ಜಯ ಗಳಿಸಿದೆ. ಕೇಜ್ರಿವಾಲ್ ಜನರ ಸಾಮಾನ್ಯ ಸಮಸ್ಯೆಗಳತ್ತ ಗಮನ ಹರಿಸಿ ಜನಪರ ಯೋಜನೆಗಳನ್ನು ತಂದರು. ಸ್ಕೂಲ್, ನೀರಾವರಿ, ಸಾರಿಗೆ ಸೇರಿದಂತೆ ಜನಸಾಮಾನ್ಯರ ಅಗತ್ಯತೆಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಿದ್ದಾರೆ ಎಂದರು.
ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷ. ದೇಶದಲ್ಲಿ ನಾವೇ ಇದ್ದಿವೀ ಅಂತ ಮೆರೆಯುತ್ತಿದ್ದರು. ಅವರು ಸಿಎಎ ಅಂತ ಮಾತನಾಡಿ ಅಭಿವೃದ್ಧಿಯ ವಿಷಯ ಮರೆತರು. ಆದರೆ ಜನ ಅದನ್ನು ಕೇಳಲಿಲ್ಲ. ಎಎಪಿ ಗೆಲುವು ನಮಗೆ ಸ್ಪೂರ್ತಿ. ನಾನು ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಒಂದೇ ತಾಯಿ ಮಕ್ಕಳಂತೆ ನಿರಂತರ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಸೋಲಿನ ಉತ್ತರ ಈಗ ಕೊಡುವುದಿಲ್ಲ. 1989ರಲ್ಲಿ ನನ್ನನ್ನೇ ಪಕ್ಷದಿಂದ ಹೊರಗೆ ಹಾಕಿದ್ದರು. ಆಗ ಯಾವ ಸ್ನೇಹಿತರೂ ನನ್ನ ಜೊತೆ ಉಳಿಯಲಿಲ್ಲ. ಯಾರೂ ಸಹ ಹಣ ಕೊಡಲಿಲ್ಲ. ನಾನು ನನ್ನ ನಾದಿನಿ ಮನೆ ಮಾಡಿ ಪಕ್ಷ ಕಟ್ಟಿದೆ ಎಂದು ತಿಳಿಸಿದರು.
ನನಗೆ ಆ ಸಂದರ್ಭ ಪಕ್ಷ ಕಟ್ಟುವ ಛಲ ನನ್ನಲ್ಲಿತ್ತು. ಹಾಗಾಗಿ 1994ರಲ್ಲಿ ಪಕ್ಷವನ್ನು ಕಟ್ಟಿ ಪಕ್ಷದ ಅಧ್ಯಕ್ಷನಾದೆ. ಆ ಸಂದರ್ಭ ಯಾರೊಬ್ಬನೂ ನನಗೆ ಸಹಾಯ ಮಾಡಲಿಲ್ಲ. ಪಿ ಜಿ ಆರ್ ಸಿಂಧ್ಯ ಸೇರಿದಂತೆ ಕೆಲವರು ಮಾತ್ರ ಸಹಾಯ ಮಾಡಿದರು. ಆ ನಂತರ ನನ್ನ ಮೇಲೆ ತನಿಖೆ ನಡೆಸಿದರು. ಆದರೆ ನಾನು ಯಾರಿಗೂ ಹೆದರುವುದಿಲ್ಲ. ನನ್ನ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೇಳಿದರು.