ನವದೆಹಲಿ, ಫೆ 11 (DaijiworldNews/SM): ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕೈ, ಕಮಲವನ್ನು ಪೊರಕೆ ಗುಡಿಸಿದ್ದು, ಮತ್ತೊಮ್ಮೊ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿಕೊಂಡಿದೆ.
ಆ ಮೂಲಕ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕಿದು ಹ್ಯಾಟ್ರಿಕ್ ಗೆಲುವಾಗಿದೆ. ಫೆಬ್ರವರಿ ಎಂಟರಂದು ನಡೆದ ಚುನಾವಣೆಯ ಫಲಿತಾಂಶ ಮಂಗಳವಾರದಂದು ಪ್ರಕಟಗೊಂಡಿದೆ. 70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನ ಸಭೆಯ ಪೈಕಿ ಸುಮಾರು 62 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷವೇ ಗೆದ್ದುಕೊಂಡಿದೆ. ಉಳಿದ ಎಂಟು ಸ್ಥಾನಗಳಲ್ಲಿ ಮಾತ್ರವೇ ಕಮಲ ಅರಳಿದೆ. ಆದರೆ, ಒಟ್ಟಾರೆ ದೆಹಲಿಯಲ್ಲಿ ಕಮಲ ಅರಳಿಸುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕನಸು ಠುಸ್ ಆಗಿದೆ.
ಆದರೆ, ಪ್ರಮುಖ ರಾಜಕೀಯ ಪಕ್ಷ ಈ ಹಿಂದೆ ದೆಹಲಿಯಲ್ಲಿ ದರ್ಬಾರ್ ನಡೆಸಿದ್ದ ಕಾಂಗ್ರೆಸ್ ಗೆ ಮತ್ತೊಮ್ಮೆ ರಾಷ್ಟ್ರ ರಾಜಧಾನಿಯ ಜನ ಕೈಕೊಟ್ಟಿದ್ದಾರೆ. ಖಾತೆಯನ್ನು ತೆರೆಯಲು ಸಾಧ್ಯವಾಗದೆ, ಸೋತು ಸುಣ್ಣಾಗಿದೆ. ಕೇಜ್ರಿವಾಲ್ ಅವರ ಅಭಿವೃದ್ಧಿ ಕಾರ್ಯಗಳಿಂದಾಗಿಯೇ ಮತ್ತೊಮ್ಮೆ ದೆಹಲಿಯ ಜನತೆ ಅವರ ಕೈಹಿಡಿದಿದ್ದಾರೆ.
ಇನ್ನು ಪ್ರಚಂಡ ಗೆಲುವನ್ನು ದಾಖಲಿಸಿರುವ ಅರವಿಂದ ಕೇಜ್ರಿವಾಲ್ ಫೆಬ್ರವರಿ ೧೪ರಂದು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.