ನವದೆಹಲಿ, ಫೆ 11 (DaijiworldNews/SM): 70 ಸದಸ್ಯ ಬಲ ಹೊಂದಿರುವ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ವಿಜಯಗಳಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಂದೆ ಕೈ, ಕಮಲದ ಕಮಾಲ್ ನಡೆಯಲೇ ಇಲ್ಲ. ಇದೀಗ ಮೂರನೇ ಬಾರಿಗೆ ಸಿಎಂ ಆಗಿ ಆಯ್ಕೆಯಾಗಿರುವ ಅರವಿಂದ ಕೇಜ್ರಿವಾಲ್ ಗೆ ರಾಷ್ಟ್ರ ನಾಯಕರಿಂದ ಅಭಿನಂದನೆಗಳ ಮಹಾ ಪೂರವೇ ಹರಿದು ಬರುತ್ತಿದೆ.
ದೆಹಲಿ ವಿಧಾನ ಸಭೆ ಗೆದ್ದ ಕೇಜ್ರಿವಾಲ್ ಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟರ್ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಶುಭ ಹಾರೈಸಿರುವ ಪ್ರಧಾನಿಗಳು ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಗೆಲುವನ್ನು ಉಲ್ಲೇಖಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಈ ಗೆಲುವು ಭಾರತೀಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಯ ಸಂಕೇತವಾಗಿದೆ ಎಂದಿದ್ದಾರೆ.
ಇನ್ನು "ದ್ವೇಷದ ಮಾತು ಮತ್ತು ವಿಭಜಕ ರಾಜಕಾರಣದ ಮೂಲಕ ಜನರ ಭಾವನೆಗಳ ಮೇಲೆ ಆಟ ಆಡುವ ನಾಯಕರಿಗೆ ಇದೊಂದು ಮುನ್ಸೂಚನೆ ಎಂಬುವುದಾಗಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದು, ಮೂರನೇ ಬಾರಿಗೆ ಆಯ್ಕೆಯಾದ ಆಮ್ ಆದ್ಮಿ ಪಕ್ಷಕ್ಕೆ ಶುಭಹಾರೈಸಿದ್ದಾರೆ.