ನವದೆಹಲಿ, ಫೆ 12 (Daijiworld News/MB) : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷ ಸಂಭ್ರಮಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಷದ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.
ನರೇಶ್ ಯಾದವ್
ತಮ್ಮ ಚುನಾವಣಾ ಕ್ಷೇತ್ರದಲ್ಲಿರುವ ದೇವಾಲಯಕ್ಕೆ ಹೋಗಿದ್ದ ಮಹರೌಲಿ ಶಾಸಕ ನರೇಶ್ ಯಾದವ್ ಮತ್ತು ಆತನ ಬೆಂಬಲಿಗರು ಪ್ರಾರ್ಥಿಸಿ ಹಿಂತಿರುಗುತ್ತಿದ್ದಾಗ ನೈಋತ್ಯ ದೆಹಲಿಯ ಕೃಷ್ಣಾಗಡ್ ಗ್ರಾಮದಲ್ಲಿ ಸಂಚರಿಸುವ ವೇಳೆ ವಾಹನದ ಮೇಲೆ ದುಷ್ಕರ್ಮಿಗಳು ಏಳು ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು ಮತ್ತೋರ್ವನಿಗೆ ಗಾಯಗಳಾಗಿವೆ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗುಂಡಿನ ದಾಳಿಯಲ್ಲಿ ಪಕ್ಷದ ಕಾರ್ಯಕರ್ತ ಅಶೋಕ್ ಮನ್ ಎಂಬವರು ಸಾವಿಗೀಡಾಗಿದ್ದಾರೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಟ್ವೀಟಿಸಿದ್ದಾರೆ.
ಮಹರೌಲಿಯಲ್ಲಿ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯಲ್ಲಿ ಅಶೋಕ್ ಮನ್ ಹತ್ಯೆಯಾಗಿದ್ದಾರೆ. ನರೇಶ್ ಯಾದವ್ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದರು ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಎಎಪಿ ಶಾಸಕ ಮತ್ತು ಕಾರ್ಯಕರ್ತರು ದೇವಸ್ಥಾನಕ್ಕೆ ಹೋಗಿ ಹಿಂತಿರುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಒಬ್ಬ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದು ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ ಎಂದು ಎಎಪಿ ಟ್ವೀಟಿಸಿದೆ.