ಬೆಂಗಳೂರು, ಫೆ 12 (Daijiworld News/MB) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಖಾತೆ ಹಂಚಿಕೆಯಾದ 24 ಗಂಟೆಯೊಳಗೇ ನೂತನ ಸಚಿವರು ಬೇಡಿಕೆಯಂತೆ ಖಾತೆ ಬದಲು ಮಾಡಿ ಮರು ಹಂಚಿಕೆ ಮಾಡಿದ್ದಾರೆ.
ಸೋಮವಾರವಷ್ಟೇ ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಆದರೆ ಈ ಪೈಕಿ ಬಿ.ಗೋಪಾಲಯ್ಯ, ಆನಂದ ಸಿಂಗ್ ಮತ್ತು ಬಿ.ಸಿ.ಪಾಟೀಲ ಅವರು ತಮಗೆ ನೀಡಲಾದ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಖಾತೆ ಬದಲಿಸುವಂತೆ ಮುಖ್ಯಮಂತ್ರಿ ಅವರನ್ನು ಅಂದು ರಾತ್ರಿಯೇ ಭೇಟಿ ಮಾಡಿ ಪಟ್ಟು ಹಿಡಿದರು ಎಂದು ಹೇಳಲಾಗಿದೆ.
ಯಡಿಯೂರಪ್ಪನವರು ಅವರ ಒತ್ತಡಕ್ಕೆ ಮಣಿದು ಖಾತೆಯನ್ನು ಬದಲಾವಣೆ ಮಾಡಲು ಒಪ್ಪಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಮಂಗಳವಾರ ಬೆಳಿಗ್ಗೆ ಖಾತೆಗಳ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿದರು. ಆದರೆ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ ಸುಧಾಕರ್ ಅವರ ಖಾತೆ ಬದಲಾವಣೆ ಆಗಿಲ್ಲ.
ಹಿರಿಯ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜತೆಗೆ ಸಹಕಾರ ನೀಡಲಾಗಿತ್ತು, ಆದರೆ ಈಗ ಅದನ್ನು ಹಿಂಪಡೆಯಲಾಗಿದೆ. ಬಿ.ಸಿ.ಪಾಟೀಲ ಅವರಿಗೆ ಮೊದಲು ಅರಣ್ಯ ಖಾತೆ ನೀಡಲಾಗಿತ್ತು. ಪರಿಸರ ಕೂಡಾ ಅವರದ್ದೆ ಆಗಿತ್ತು. ಈಗ ಆ ಎರಡು ಖಾತೆಯನ್ನು ಸೇರಿಸಿ ಆನಂದ ಸಿಂಗ್ ಅವರಿಗೆ ನೀಡಲಾಗಿದೆ.
ಈಗ ಆನಂದಸಿಂಗ್ಗೆ ಅರಣ್ಯ, ಪರಿಸರ, ಜೀವಿಶಾಸ್ತ್ರ, ಕೆ.ಗೋಪಾಲಯ್ಯಗೆ ಆಹಾರ ಮತ್ತು ನಾಗರಿಕ ಪೂರೈಕೆ, ಬಿ.ಸಿ.ಪಾಟೀಲ್ಗೆ ಕೃಷಿ, ಶ್ರೀಮಂತ ಪಾಟೀಲ್ಗೆ ಜವಳಿ, ಕೈಮಗ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಬೈರತಿ ಬಸವರಾಜ್ಗೆ ನಗರಾಭಿವೃದ್ಧಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಶಿವರಾಮ ಹೆಬ್ಬಾರ್ಗೆ ಕಾರ್ಮಿಕ, ಸಕ್ಕರೆ ಖಾತೆ ಹಂಚಲಾಗಿದೆ.
ಈ ಮೊದಲು ರಮೇಶ್ ಜಾರಕಿಹೊಳಿಗೆ ನೀರಾವರಿ, ಬಿ.ಸಿ.ಪಾಟೀಲ್ಗೆ ಇಂಧನ ಖಾತೆ, ಡಾ.ಸುಧಾಕರ್ಗೆ ವೈದ್ಯಕೀಯ ಶಿಕ್ಷಣ, ನಾರಾಯಣಗೌಡಗೆ ಆಹಾರ ಮತ್ತು ನಾಗರಿಕ, ಶಿವರಾಂ ಹೆಬ್ಬಾರ್ಗೆ ಪೌರಾಡಳಿತ, ಎಸ್.ಟಿ. ಸೋಮಶೇಖರ್ಗೆ ಸಹಕಾರ, ಭೈರತಿ ಬಸವರಾಜುಗೆ ನಗರಾಭಿವೃದ್ಧಿ, ಗೋಪಾಲಯ್ಯಗೆ ಕಾರ್ಮಿಕ ಖಾತೆ, ಶ್ರೀಮಂತ ಪಾಟೀಲ್ಗೆ ಸಕ್ಕರೆ, ಆನಂದ್ ಸಿಂಗ್ಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ನೀಡಲಾಗಿತ್ತು.