ಬೀದರ್, ಫೆ 12 (Daijiworld News/MB) : ಶಾಹಿನ್ ಪ್ರೈಮರಿ ಹಾಗೂ ಹೈಸ್ಕೂಲ್ನಲ್ಲಿ ನಾಟಕವಾಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿ ಇರುವ ಇಬ್ಬರು ಮಹಿಳೆಯರ ಪರವಾಗಿ ಅಡ್ವಕೇಟ್ ಬಿಟಿ ವೆಂಕಟೇಶ್ ವಾದ ಮಂಡಿಸಿದ್ದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಆದೇಶವನ್ನು ಫೆಬ್ರವರಿ 14ಕ್ಕೆ ಮುಂದೂಡಿದರು.
ಮ್ಯಾನೇಜ್ಮೆಂಟ್ಗೆ ಫೆಬ್ರವರಿ 17ರಂದು ನಿರೀಕ್ಷಿತ ಜಾಮೀನು ನೀಡುವುದನ್ನು ಪ್ರಶ್ನಿಸಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣಾ ಅರ್ಜಿ ಸಲ್ಲಿಸಲಿದ್ದಾರೆ.
ಸಿಆರ್ಪಿಸಿ 438ರ ಅಡಿ ಮ್ಯಾನೇಜ್ಮೆಂಟ್ ಹಾಗೂ ಸಂಸ್ಥೆಯ ಮುಖ್ಯಸ್ಥರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಮಹಿಳೆಯರ ಪರವಾಗಿ ಸಿಆರ್ಪಿಸಿ ಸೆಕ್ಷನ್ 439ರ ಅಡಿ ಖಾಯಂ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ.
ದೇಶದ್ರೋಹ ಸಹಿತ ಹಲವು ದಂಡ ಸಂಹಿತೆಗಳಿರುವ ಸೆಕ್ಷನ್ನ್ನು ಎಫ್ಐಆರ್ನಲ್ಲಿ ಸೇರಿಸಲಾಗಿದೆ. ದೂರನ್ನು ನೋಡಿದವರಿಗೆ ಈ ಪ್ರಕರಣದಲ್ಲಿ ಸಣ್ಣ ಪುರಾವೆಯೂ ಇಲ್ಲದಿರುವುದು ತಿಳಿಯುತ್ತದೆ. ಒಂದು ವೇಳೆ ಇದು ಪ್ರಧಾನ ಮಂತ್ರಿ ವಿರುದ್ಧವಾದ ನಾಟಕವೇ ಆಗಿದ್ದರೆ ಪ್ರಧಾನಿಗೆ ನೋವಾಗಿದೆ ಎಂದು ಯಾರು ಕೂಡಾ ದೂರು ನೀಡ ಬಹುದೇ? ನ್ಯಾಯಾಲಯದ ಪ್ರಕಾರ ನಿಂದನೆಗೆ ಒಳಗಾದ ವ್ಯಕ್ತಿಯೇ ದೂರು ನೀಡಬೇಕು ಎಂದು ಬಿ.ಟಿ. ವೆಂಕಟೇಶ್ ಹೇಳಿದ್ದಾರೆ.
ಇಬ್ಬರು ಮಹಿಳೆಯರು ದೇಶ ಬಿಟ್ಟು ಹೋಗದಂತೆ ಆದೇಶಿಸಿ ಜಾಮೀನು ನೀಡಬೇಕು. ನ್ಯಾಯಾಲಯದ ಎಲ್ಲಾ ನಿಯಮಗಳನ್ನು ಇವರು ಪಾಲಿಸುತ್ತಾರೆ ಗೌರವಿಸುತ್ತಾರೆ ಎಂದು ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಸಾಮಾನ್ಯ ನೆಲೆಯಲ್ಲಿ ಜಾಮೀನು ನೀಡುವುದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡುವ ಹಾಗೂ ದೇಶ ಬಿಟ್ಟು ಹೋಗುವ ಅಪಾಯವಿದೆ ಎಂದು ಹೇಳಿದರು.