ನವದೆಹಲಿ, ಫೆ.12 (DaijiworldNews/PY): ಅಸ್ಸಾಂನಲ್ಲಿ ಎನ್ಆರ್ಸಿ ಅಂತಿಮ ಪಟ್ಟಿ ಆನ್ಲೈನ್ನಲ್ಲಿ ಲಭ್ಯವಾಗದೇ ಇರುವುದರ ಬಗ್ಗೆ ಜನರು ಆತಂಕಗೊಂಡಿದ್ದಾರೆ.ಕಳಫೆದ ವರ್ಷ ಆಗಸ್ಟ್ನಲ್ಲಿ ತಯಾರಿಸಿದ ಎನ್ಆರ್ಸಿ ಬಿಟ್ಟು ಹೋಗಿರುವ ಹಲವಾರು ವ್ಯಕ್ತಿಗಳ ಮಾಹಿತಿಯನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಈ ಸಮಸ್ಯೆ ತಾತ್ಕಾಲಿಕ. ಕೆಲವೇ ದಿನಗಳಲ್ಲಿ ಇದನ್ನು ಸರಿಪಡಿಸಲಾಗುತ್ತದೆ ಎಂದು ಅಸ್ಸಾಂನ ಎಂದು ಅಸ್ಸಾಂನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಕ್ಲೌಡ್ ಸ್ಟೋರೆಜ್ ಮಾಡಿದ್ದ ವಿಪ್ರೊ ಒಪ್ಪಂದದ ಕಾಲಾವಧಿ ಮುಗಿದಿದ್ದು, ಕ್ಲೌಡ್ ಸ್ಟೋರೇಜ್ ಬಳಕೆ ಸ್ಥಗಿತಗೊಂಡಿದ್ದ ಕಾರಣ ಡಿಸೆಂಬರ್ 15ರ ಬಳಿಕ ಮಾಹಿತಿಗಳು ಆಫ್ಲೈನ್ ಆಗಿವೆ ಎಂದು ಎನ್ಆರ್ಸಿ ಸಂಚಾಲಕರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕ್ಲೌಡ್ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ. ಎನ್ಆರ್ಸಿ ಮಾಹಿತಿ ಸುರಕ್ಷಿತವಾಗಿವೆ. ಅವುಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಗೃಹ ಸಚಿವಾಲಯದ ವಕ್ತಾರ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಮಾಹಿತಿ ಲಭ್ಯವಾಗದೇ ಇರುವ ಕಾರಣ ಜನರು ಭಯಗೊಂಡಿದ್ದರು. ಪಟ್ಟಿಯಿಂದ ಹೊರಗೆ ಉಳಿದಿರುವ ಜನರಲ್ಲಿ ಆತಂಕ ಹೆಚ್ಚಿದೆ.
ಈ ಮಾಹಿತಿಗಳು ಆಫ್ಲೈನ್ ಆಗಿದೆ. ಆದರೆ ಇದರ ಹಿಂದೆ ದುರುದ್ದೇಶವಿದೆ ಎಂಬ ಆರೋಪವನ್ನು ಎನ್ಆರ್ಸಿ ರಾಜ್ಯ ಸಂಚಾಲಕ ಹಿತೇಶ್ ದೇವ್ ಶರ್ಮಾ ತಳ್ಳಿಹಾಕಿದ್ದಾರೆ.
ಮಾಹಿತಿಗಳು ನಾಪತ್ತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜ.30ರಂದು ಸೇರಿದ ಸಭೆಯಲ್ಲಿ ತೀರ್ಮಾನಿಸಿ ಫೆಬ್ರವರಿ ಮೊದಲ ವಾರ ವಿಪ್ರೊಗೆ ಪತ್ರ ಬರೆಯಲಾಗಿತ್ತು. ವಿಪ್ರೊ ಈ ಮಾಹಿತಿಯನ್ನು ಲೈವ್ ಮಾಡಿದರೆ ಅದು ಸಾರ್ವಜನಿಕರಿಗೆ ಸಿಗುತ್ತದೆ. ಮುಂದಿನ ಎರಡು ಮೂರು ದಿನಗಳಲ್ಲಿ ಇದು ಸರಿ ಹೋಗುತ್ತದೆ ಎಂಬ ನಂಬಿಕೆ ಇದೆ ಎಂದು ಶರ್ಮಾ ಹೇಳಿದ್ದಾರೆ.
ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯು ಆಗಸ್ಟ್ 31, 2019ರಲ್ಲಿ ಪ್ರಕಟವಾಗಿತ್ತು. ಈ ಪಟ್ಟಿಯನ್ನು http://www.nrcassam.nic.in/ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಅಂತಿಮ ಎನ್ಆರ್ಸಿ ಪಟ್ಟಿಯಲ್ಲಿ 19,06,657 ವ್ಯಕ್ತಿಗಳನ್ನು ಹೊರಗಿಡಲಾಗಿತ್ತು. 3,30,27,661 ಅರ್ಜಿದಾರರ ಪೈಕಿ 3,11,21,004 ಮಂದಿ ಈ ಪಟ್ಟಿಯಲ್ಲಿದ್ದಾರೆ.