ನವದೆಹಲಿ, ಫೆ.12 (DaijiworldNews/PY): ಮಕ್ಕಳ ಅಶ್ಲೀಲ ಚಿತ್ರಗಳು, ಅತ್ಯಾಚಾರದ ವಿಡಿಯೊಗಳು ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವ ಸಂಬಂಧ ಗೂಗಲ್, ವಾಟ್ಸ್ಆ್ಯಪ್, ಫೇಸ್ಬುಕ್ನಂತಹ ಜಾಲತಾಣ ಸಂಸ್ಥೆಗಳ ಜೊತೆ ಕೇಂದ್ರ ಸರ್ಕಾರ ಸಭೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಫೆ.11 ಮಂಗಳವಾರದಂದು ಸೂಚಿಸಿದೆ.
ಹೈದರಾಬಾದ್ ಮೂಲದ ಎನ್ಜಿಒ ಪ್ರಜ್ವಲದ ಪ್ರತಿನಿಧಿಯಾಗಿರುವ ವಕೀಲೆ ಅಪರ್ಣಾ ಭಟ್ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭ ಮುಖ್ಯನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠ ಈ ಸೂಚನೆ ನೀಡಿತು.
ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ವಿಡಿಯೊಗಳು ಹರಡುವುದನ್ನು ತಡೆಗಟ್ಟುವ ವಿಚಾರವಾಗಿ ಗೃಹ ವ್ಯವಹಾರಗಳ ಸಚಿವಾಲಯ ಸಂಬಂಧಪಟ್ಟ ಸಂಸ್ಥೆಗಳ ಜೊತೆ 2018ರ ಡಿಸೆಂಬರ್ನಿಂದಲೂ ಸಭೆ ನಡೆಸಿಲ್ಲ ಎಂದು ಭಟ್ ನೀಡಿದ ಮಾಹಿತಿಯನ್ನು ಪರಿಗಣಿಸಿದ ಬಳಿಕ ಪೀಠ, ಸಭೆ ನಡೆಸುವಂತೆ ಎಂಎಚ್ಎಗೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿತ್ತು.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಎಂಎಚ್ಎ ಸಭೆ ನಡೆಸುತ್ತದೆ. ಈ ವಿಚಾರವಾಗಿ ಯಾವುದೇ ಆದೇಶ ನೀಡುವುದು ಬೇಡ ಎಂದು ಪೀಠಕ್ಕೆ ತಿಳಿಸಿದರು.
ಮಕ್ಕಳ ಅಶ್ಲೀಲ ಚಿತ್ರಗಳು, ಅತ್ಯಾಚಾರದ ವಿಡಿಯೊಗಳನ್ನು ಅಂತರ್ಜಾಲದಿಂದ ತೆಗೆಯಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಬಹುದು ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಸಿಬಿಐಗೆ ಆದೇಶಿಸಿದ್ದ ಪೀಠ ಎರಡು ಅತ್ಯಾಚಾರ ಪ್ರಕರಣಗಳ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ ಎಂದು 2015ರಲ್ಲಿ ಸುಪ್ರೀಂಕೋರ್ಟ್ನ ಆಗಿನ ಸಿಜೆಐ ಎಚ್.ಎಲ್. ದತ್ತು ಅವರಿಗೆ ಪತ್ರ ಬರೆಯಲಾಗಿತ್ತು. ಅದರ ಜೊತೆಗೆ ಪೆನ್ಡ್ರೈವ್ನಲ್ಲಿ ಈ ವಿಡಿಯೊಗಳನ್ನೂ ನೀಡಲಾಗಿತ್ತು. ಇದನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಆಗಿನ ನ್ಯಾಯಪೀಠ, ವಿಡಿಯೊ ಹರಡಲು ಕಾರಣರಾದವರನ್ನು ಪತ್ತೆ ಹಚ್ಚಲು ತನಿಖೆ ನಡೆಸಬೇಕು ಎಂದು ಸಿಬಿಐಗೆ ಸೂಚಿಸಿತ್ತು.
ತ್ವರಿತ ಕ್ರಮಕ್ಕೆ ಎನ್ಜಿಒ ಆಗ್ರಹ ಅತ್ಯಾಚಾರ ವಿಡಿಯೊಗಳು ಹಾಗೂ ಅಶ್ಲೀಲ ಚಿತ್ರಗಳು ಹರಡುವುದನ್ನು ತಕ್ಷಣವೇ ತಡೆಯಬೇಕು ಎನ್ನುವುದು ಎನ್ಜಿಒ ನಿಲುವು. ಆದರೆ ಈ ವಿಚಾರವಾಗಿ ಜಾಲತಾಣ ಸಂಸ್ಥೆಗಳು ಭಿನ್ನ ನಿಲುವು ಹೊಂದಿದೆ ಎಂದು ಅಪರ್ಣಾ ಭಟ್ ಪೀಠಕ್ಕೆ ತಿಳಿಸಿದರು.
ಅಶ್ಲೀಲ ವಿಡಿಯೊಗಳು ಜಾಲತಾಣದಲ್ಲಿ ಕಂಡುಬರುತ್ತಿದ್ದಂತೆಯೇ ಅವುಗಳು ಹರಡುವುದನ್ನು ತಡೆಯಬಹುದು ಎನ್ನುವುದು ಎನ್ಜಿಒ ನಿಲುವು. ಆದರೆ, ಅಂತಹ ವಿಡಿಯೊಗಳು ಇರುವುದನ್ನು ತಮ್ಮ ಗಮನಕ್ಕೆ ತಂದ ಬಳಿಕವಷ್ಟೆ ಅವುಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಬಹುದು ಎಂದು ಜಾಲತಾಣಗಳು ಹೇಳುತ್ತವೆ. ಅತ್ಯಾಚಾರದ ವಿಡಿಯೊ ಹರಡುವುದನ್ನು ತಡೆಯಲು 36 ತಾಸುಗಳ ಬಳಿಕ ಕ್ರಮ ಕೈಗೊಳ್ಳುವುದಾದರೆ ಅಷ್ಟರಲ್ಲಾಗಲೇ ವಿಡಿಯೋಗಳು ವೈರಲ್ ಆಗಿರುತ್ತವೆ ಎಂದು ಭಟ್ ಅವರು ವಾದಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೀಡಬೇಕು ಎಂದು ಭಟ್ ಅವರಿಗೆ ಪೀಠ ಸೂಚಿಸಿತು. ನಾಲ್ಕು ವಾರಗಳ ಬಳಿಕ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.