ಬೆಂಗಳೂರು, ಫೆ.12 (DaijiworldNews/PY): "ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕೆಲ ಕನ್ನಡಪರ ಸಂಘಟನೆಗಳು ಫೆ.13 ಗುರುವಾರದಂದು ನಡೆಸಲಿರುವ ಕರ್ನಾಟಕ ಬಂದ್ ವೇಳೆ ಬಸ್ ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲ" ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಫೆ.13 ಗುರುವಾರದಂದು ಎಂದಿನಂತೆ ಬಸ್ ಸಂಚಾರ ಇರುತ್ತೆ. ಈಗಾಗಲೇ ಕಾರ್ಮಿಕ ಸಂಘಟನೆಗಳು ಬಸ್ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಗಲಾಟೆ ನಡೆದರೆ ಸಂದರ್ಭಕ್ಕೆ ಅನುಸಾರವಾಗಿ ಅಲ್ಲಿನ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ಕೃಷಿ ಖಾತೆ ವಾಪಸ್ ಪಡೆದ ವಿಚಾರವಾಗಿ ಮಾತನಾಡಿದ ಅವರು, "ನನಗೆ ಮೊದಲು ಸಾರಿಗೆ ಖಾತೆ ಕೊಟ್ಟಿದ್ದರು. ನಂತರ ಹೆಚ್ಚುವರಿಯಾಗಿ ಇನ್ನೊಂದು ಖಾತೆ ಕೊಟ್ಟಿದ್ದರು. ಈಗ ಒಂದು ಖಾತೆ ವಾಪಸ್ ಪಡೆದಿದ್ದಾರೆ ಅಷ್ಟೆ. ಇಂತಹದ್ದೇ ಖಾತೆ ಬೇಕು ಅಂತ ಯಾರು ಕೇಳಿಲ್ಲ. ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಹೊಸದಾಗಿ ಬಂದವರಿಗೆ ಪಕ್ಷದ ಸಿದ್ದಾಂತ ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ನಿಧಾನವಾಗಿ ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ" ಎಂದರು.
"ಬೇರೆ ಪಕ್ಷದಲ್ಲಿ ಇದ್ದಾಗ ಆರೋಪ ಪ್ರತ್ಯಾರೋಪ ಸಹಜ. ನಾವು ಹಿಂದೆ ಇದ್ದಾಗ ಆರೋಪ ಮಾಡಿರುತ್ತೇವೆ. ಆದರೆ, ಯಾವುದೇ ಆರೋಪ ಸಾಬೀತಾಗಿಲ್ಲ. ಆರೋಪಗಳು ಬಂದ ಕೂಡಲೇ ಅವರು ತಪ್ಪು ಮಾಡಿದ್ದಾರೆ ಅಂತ ಅಲ್ಲ. ಅವರ ಮೇಲೆ ದೂರುಗಳು ಇವೆ ಅಷ್ಟೆ. ಅವರ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ಆರೋಪ ಸಾಬೀತಾದ ಬಳಿಕ ನೋಡೋಣ" ಎಂದು ತಿಳಿಸಿದರು.
"ಯಾವುದೇ ಮೋಸ ಆಗದಂತೆ ಹುದ್ದೆ ಭರ್ತಿ ಆಗುತ್ತದೆ. ಮಧ್ಯವರ್ತಿಗಳಿಂದ ಮೋಸಕ್ಕೆ ಒಳಗಾಗಬೇಡಿ. ನೇರ ಹಾಗೂ ಪ್ರಾಮಾಣಿಕ ನೇಮಕಾತಿ ಆಗುತ್ತಿದೆ. ಹಣ ಕೊಟ್ಟು ಅಭ್ಯರ್ಥಿಗಳು ಮೋಸ ಹೋಗಬೇಡಿ. ಹುಬ್ಬಳ್ಳಿ ಹಾಗೂ ಕಲಬುರ್ಗಿ ನಿಗಮದಲ್ಲಿ ಹುದ್ದೆ ಭರ್ತಿಗೆ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ. ಕೆಲ ಮಧ್ಯವರ್ತಿಗಳು ಕೆಲಸ ಕೊಡಿಸುತ್ತೇವೆ ಎಂದು ಹಣ ಪಡೆಯುತ್ತಿದ್ದಾರೆ" ಎಂದು ಹೇಳಿದರು.
"ಹಂತ ಹಂತವಾಗಿ ವೊಲ್ವೋ ಬಸ್ ಕಡಿಮೆ ಮಾಡುವ ಚಿಂತನೆ ಇದೆ. ವೋಲ್ವೋ ಬಸ್ ನಿರ್ವಹಣೆಗೆ ಹೆಚ್ವು ಹಣ ವ್ಯಯವಾಗುತ್ತಿದೆ. ಇಂಧನದ ಖರ್ಚು, ನಿರ್ವಹಣೆ ವೆಚ್ಚಅಧಿಕವಾಗುತ್ತಿದೆ. ಹೀಗಾಗಿ ಇವುಗಳನ್ನು ಹಂತ ಹಂತವಾಗಿ ಕಡಿಮೆ ಮಾಡೋ ಚಿಂತನೆ ಇದೆ. ಬಿಎಂಟಿಸಿಯಲ್ಲಿ ಮುಂದಿನ ದಿನಗಳಲ್ಲಿ ವೋಲ್ವೋ ಬಸ್ಸುಗಳು ಇತಿಹಾಸ ಪುಟ ಸೇರಲಿವೆ. ಉಪಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಸುಳಿವು ನೀಡಿದ್ದಾರೆ. ವೋಲ್ವೋ ಬದಲಾಗಿ ಟಾಟಾ ಹಾಗೂ ಲಾಯ್ ಲ್ಯಾಂಡ್ ಕಂಪನಿಯ ಬಸ್ ಓಡಿಸುತ್ತೇವೆ. 1,200 ಹೊಸ ಬಸ್ ಖರೀದಿಗೆ ತೀರ್ಮಾನಿಸಿದ್ದೇವೆ. ಮಾರ್ಚ್ 31 ಒಳಗೆ ಬಸ್ ಕೊಡುವುದಾಗಿ ಬಸ್ ಕಂಪನಿಗಳು ಹೇಳಿವೆ" ಎಂದು ತಿಳಿಸಿದರು.
"ಎಲೆಕ್ಟ್ರಿಕ್ ಬಸ್ ವಿಚಾರದ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಕಂಪನಿಗಳು ಪ್ರಪೋಸಲ್ ಕೊಟ್ಟಿವೆ. ಮಹಾರಾಷ್ಟ್ರ, ಹರಿಯಾಣದಿಂದ ಕಂಪನಿಗಳು ಪ್ರಸ್ತಾವನೆ ಕೊಟ್ಟಿವೆ. ನಾವೇ ಬಸ್ ಕೊಟ್ಟು, ದಿನದ ಆಧಾರದಲ್ಲಿ ಲಾಭ ಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣವಾದ ಚರ್ಚೆ ಆಗಬೇಕು. ಈ ವಿಚಾರವಾಗಿ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. 60:40 ಸೂತ್ರ ಕೆಲ ಕಂಪನಿಗಳು ಮುಂದೆ ಇಟ್ಟಿವೆ. ಅವುಗಳ ಜೊತೆಯೂ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಂತಿಮ ಒಪ್ಪಂದದ ಬಳಿಕ ಟೆಂಡರ್ ಪ್ರಕ್ರಿಯೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಈಗಾಗಲೇ 3-4 ಕಂಪನಿಗಳು ಮುಂದೆ ಬಂದಿವೆ" ಎಂದರು.
"ಕೇಂದ್ರ ಸರ್ಕಾರ ದಂಡ ಹೆಚ್ಚಳಕ್ಕೆ ತಿದ್ದುಪಡಿ ತಂದಿದೆ. ನಾವು ಕೂಡಾ ದಂಡ ಹೆಚ್ಚಳ ಮಾಡೋ ಪ್ರಸ್ತಾವನೆ ಇದೆ. ಜನರಿಗೆ ಅಗತ್ಯ ಜಾಗೃತಿ ಮೂಡಿಸಿ ದಂಡ ಹೆಚ್ಚುವರಿ ಮಾಡುವ ಬಗ್ಗೆ ಚಿಂತನೆ ಮಾಡುತ್ತೇವೆ. ರಸ್ತೆ ಸುರಕ್ಷತೆ ವಿಚಾರವಾಗಿ ದಂಡ ಹೆಚ್ಚಳ ಮಾಡುವ ಪ್ರಸ್ತಾವನೆ ಇದೆ. ಮೊದಲು ಜನರಿಗೆ ಜಾಗೃತಿ ಮೂಡಿಸುತ್ತೇವೆ. ಆದಾದ ಬಳಿಕ ದಂಡ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ" ಎಂದು ಹೇಳಿದರು.
"ಹೊಸ ವರ್ಷದಿಂದ ಮತ್ತೆ ವಾಹನ ನೋಂದಣಿ ಚುರುಕಾಗಿದೆ. ವಾಹನ ನೋಂದಣಿ ತೆರಿಗೆ ಈ ಬಾರಿ ಸ್ವಲ್ಪ ಕೊರತೆ ಆಗುವ ಸಾಧ್ಯತೆ ಇದೆ. ಈ ಬಾರಿ 7 ಸಾವಿರ ನಿರೀಕ್ಷೆ ಇತ್ತು. ಇದರಲ್ಲಿ 1200 ಕೋಟಿ ಕೊರತೆ ಆಗುವ ಸಾಧ್ಯತೆ ಇದೆ ಅಕ್ಟೋಬರ್, ನವೆಂಬರ್, ಡಿಸೆಂಬರ್ನಲ್ಲಿ ವಾಹನ ನೋಂದಣಿ ಕಡಿಮೆ ಆಗಿದೆ" ಎಂದು ಹೇಳಿದರು.