ನವದೆಹಲಿ, ಫೆ.12 (DaijiworldNews/PY): "ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಎಲ್ಲಾ ಶಾಲೆಗಳಲ್ಲಿ ಹನುಮಾನ್ ಚಾಲಿಸಾ ಮಂತ್ರವನ್ನು ಜಾರಿಗೆ ತರಲಿ, ಕೇಜ್ರಿವಾಲ್ ಅವರು ಹನುಮಾನ್ ಭಕ್ತರಾದ್ದರಿಂದ ದೆಹಲಿಯ ಶಾಲಾ ಮಕ್ಕಳು ಯಾಕೆ ಈ ಮಂತ್ರದಿಂದ ವಂಚಿತರಾಗಬೇಕು" ಎಂದು ದೆಹಲಿ ಬಿಜೆಪಿ ಮುಖಂಡ ಕೈಲಾಸ್ ವಿಜಯವರ್ಗಿಯಾ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟರ್ನಲ್ಲಿ ಶುಭಾಶಯ ತಿಳಿಸಿದ ಅವರು, "ಹನುಮಾನ್ ಚಾಲೀಸಾ ಮಂತ್ರವನ್ನು ದೆಹಲಿಯ ಎಲ್ಲಾ ಶಾಲೆ, ಮದರಸಾ, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಮಾಡಿ, ದೆಹಲಿ ವಿದ್ಯಾರ್ಥಿಗಳೇಕೆ ಭಜರಂಗಬಲಿಯ ಆಶೀರ್ವಾದದಿಂದ ವಂಚಿತರಾಗಬೇಕು. ಯಾರೇ ಬರಲಿ ಹನುಮಾನ್ ಆಶೀರ್ವಾದ ನೀಡುತ್ತಾರೆ. ಈಗ ಕಾಲ ಕೂಡಿ ಬಂದಿದೆ" ಎಂದರು.
ಫೆ.11 ಮಂಗಳವಾರದಂದು ದೆಹಲಿ ಚುನಾವಣೆಯ ಫಲಿತಾಂಶ ಬಂದಿದ್ದು, ಫಲಿತಾಂಶ ಹೊರಬಂದ ಸಂದರ್ಭದಲ್ಲಿ ಕೇಜ್ರಿವಾಲ್ ಅವರು, ಈ ದಿನ ಹನುಮಾನ್ ದೇವರ ದಿನ, ದೇವರು ದೆಹಲಿಯ ಜನರನ್ನು ಆಶೀರ್ವದಿಸಿದ್ದಾರೆ ಎಂದು ಹೇಳಿದ್ದರು.
ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು 62 ಸ್ಥಾನಗಳನ್ನು ಗೆದ್ದಿದ್ದು, ಫೆ.16ರಂದು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.