ಹಾಸನ, ಫೆ.12 (DaijiworldNews/PY): "ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 7 ತಿಂಗಳಾದರೂ ನಮ್ಮ ಜಿಲ್ಲೆಯಲ್ಲಿ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ಯಾವುದೇ ಪಕ್ಷಪಾತ ಮಾಡದೇ ಎಲ್ಲಾ ಕೆಲಸ ಮಾಡುತ್ತೇವೆ ಎಂದು ಸಿಎಂ ಬಿಎಸ್ವೈ ಹೇಳಿದ್ದರು" ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
"ನಮ್ಮ ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿ ಕೆಲಸಗಳು ಸೇರಿದಂತೆ ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಈ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ, ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ ಫೆ.24 ರಂದು ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡುತ್ತೇವೆ" ಎಂದು ತಿಳಿಸಿದರು.
ಜೆಡಿಎಸ್ ಪಕ್ಷ ಸವಕಲು ನಾಣ್ಯ ಎಂದ ಸಚಿವ ಆರ್ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಹಳೇ ಕಾಲದ ಮೇಲೆ ನಾಣ್ಯವೇ ನಡೆಯೋದು, ಈಗ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನ ಮೊದಲು ಉಳಿಸಿಕೊಳ್ಳಲಿ, ದೆಹಲಿಯಲ್ಲಿ ಬಿಜೆಪಿಯನ್ನು ಆಮ್ಆದ್ಮಿ ಪಕ್ಷದವರು ಗುಡಿಸಿ ಹಾಕಿದ್ದಾರೆ" ಎಂದರು.
ಹಾಸನದಲ್ಲಿ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಐಟಿ ದಾಳಿಯು ಕೇವಲ ತುಮಕೂರು, ಹಾಸನ ಹಾಗೂ ಮಂಡ್ಯದಲ್ಲಿ ಮಾತ್ರ ನಡೆಯುತ್ತಿದೆ. ಸವಕಲು ನಾಣ್ಯ ಅಂತಾರೆ ಯಾಕೆ ದಾಳಿ ಮಾಡುತ್ತಾರೆ" ಎಂದು ಕೇಳಿದರು.
"ನಾಳೆ ಎಲ್ಲ ಕನ್ನಡಪರ ಸಂಘಟನೆ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತವೆ. ನೆಲ, ಜಲದ ದೃಷ್ಟಿಯಿಂದ ಅವರು ಮಾಡುತ್ತಿರುವ ಪ್ರತಿಭಟನೆ ಸರಿಯಿದೆ. ನೆಲ ಜಲದ ದೃಷ್ಟಿಯಿಂದ ನಾಳೆಯ ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್ಗೆ ಜೆಡಿಎಸ್ ಬೆಂಬಲಿ ನೀಡುತ್ತದೆ" ಎಂದರು.
"ಅನಿಲ್ ನಮ್ಮಲ್ಲಿ ಬಂದು ಬೆಂಬಲಿಸುವಂತೆ ಕೇಳಿ ಕೊಂಡರು. ಆಗ ನಾನು ಕಾಂಗ್ರೆಸ್ನವರನ್ನು ಕೇಳಿದೆ. ಕಾಂಗ್ರೆಸ್ನವರು ಸ್ವತಂತ್ರ ಅಭ್ಯರ್ಥಿ ಮಾಡಿದ್ರೆ ಬೆಂಬಲ ನೀಡುವುದಾಗಿ ಹೇಳಿದರು. ನಂತರ ನಾನು ಅನಿಲ್ಗೆ ಬೆಂಬಲ ಸೂಚಿಸಿದೆ. ಅನಿಲ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿದ್ದವರು, ಸಿದ್ದಗಂಗಾ ಮಠಕ್ಕೆ ಓಡಾಡಿಕೊಂಡಿದ್ದವರು" ಎಂದು ಹೇಳಿದರು.
"ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದೇ ಅನಿಲ್ ಕುಮಾರ್ ಅಭ್ಯರ್ಥಿ ಮಾಡಿದ್ದು, ಕೋಮುವಾದ ಪಕ್ಷ ದೂರವಿಡಲು ಅನಿಲ್ ಕುಮಾರ್ ಗೆ ಬೆಂಬಲ ನೀಡಬೇಕು. ಎಂಎಲ್ಸಿ ಚುನಾವಣಾ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ನಾವು ಸಮಾನ ಮನಸ್ಕರು ಒಂದಾಗಬೇಕು" ಎಂದರು.