ನವದೆಹಲಿ, ಫೆ.12 (DaijiworldNews/PY): ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆ ವಿಳಂಬವಾಗುತ್ತಿದ್ದು, ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ತಮಗೆ ವಕೀಲರಿಲ್ಲ, ಇದ್ದ ಹಳೇಯ ವಕೀಲರನ್ನು ತೆಗೆದು ಹಾಕಲಾಗಿದೆ. ಹೊಸ ವಕೀಲರು ಬರುವವರೆಗೆ ಕಾಲಾವಕಾಶ ನೀಡಬೇಕು. ಕಾನೂನಿನ ನೆರವನ್ನು ಪಡೆಯಲು ಹೆಚ್ಚುವರಿ ಸಮಯ ಬೇಕು ಎಂದು ಕೋರ್ಟ್ಗೆ ಬೇಡಿಕೆ ಇಟ್ಟಿದ್ದಾರೆ.
ನಿರ್ಭಯಾ ಅಪರಾಧಿಗಳ ಮರಣದಂಡನೆಗೆ ಹೊಸ ದಿನಾಂಕವನ್ನು ಜಾರಿಗೊಳಿಸಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ಅಧಿಕಾರ ನೀಡಿದ ಬಳಿಕ ನಿರ್ಭಯಾ ಪೋಷಕರು ಹಾಗೂ ದೆಹಲಿ ಸರ್ಕಾರವು ಫೆ.11 ಮಂಗಳವಾರದಂದು ಹೊಸ ದಿನಾಂಕಕ್ಕಾಗಿ ನ್ಯಾಯಾಲಯಕ್ಕೆ ತೆರಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ನಿರ್ಭಯಾ ತಾಯಿ, ನಾನು ಈಗ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದೇನೆ. ನ್ಯಾಯಲಯವು ವಿಳಂಬ ತಂತ್ರಗಳನ್ನು ತಿಳಿದಿಕೊಳ್ಳಬೇಕು. ಈಗ ಅಪರಾಧಿ ಪವನ್ಗಾಗಿ ಹೊಸ ವಕೀಲರನ್ನು ನೇಮಿಸಿದರೆ ಶಿಕ್ಷೆ ಮತ್ತಷ್ಟು ತಡವಾಗುತ್ತದೆ. ತನ್ನ ಹಕ್ಕುಗಳ ಕಥೆ ಕೇಳಿ, ನಾನು ಏಳು ವರ್ಷಗಳಿಂದ ಕಾಯುತ್ತಿದ್ದೇನೆ. ಈ ಕೂಡಲೇ ಡೆತ್ ವಾರಂಟ್ ಹೊರಡಿಸಿ ಎಂದು ಹೇಳದ್ದಾರೆ.
ಈ ಮೊದಲು ನಿರ್ಭಯಾ ಅಪರಾಧಿಗಳಿಗೆ ಜ.22ರಂದು ತಿಹಾರ್ ಜೈಲಿನಲ್ಲಿ ಮರಣದಂಡನೆ ಶಿಕ್ಷೆಗಾಗಿ ದಿನಾಂಕ ನಿಗದಿಯಾಗಿತ್ತು. ಆದರೆ, ಜ.17 ನ್ಯಾಯಾಲಯದ ಆದೇಶದ ಪ್ರಕಾರ ಫೆ.1ರಂದು ಬೆಳಿಗ್ಗೆ 6 ಗಂಟೆಗೆ ಮುಂದೂಡಲಾಯಿತು.
ವಿಚಾರಣಾ ನ್ಯಾಯಾಲಯವು ಜ.31ರಂದು ತಿಹಾರ್ ಜೈಲಿನಲ್ಲಿರುವ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಮುಂದಿನ ಆದೇಶದವರೆಗೆ ತಡೆ ವಿಧಿಸಿದ ಕಾರಣ ಪುನಃ ಶಿಕ್ಷೆ ಜಾರಿ ಮುಂದಕ್ಕೆ ಹೋಗಿದೆ.