ಬೆಂಗಳೂರು, ಫೆ.12 (DaijiworldNews/PY): ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಫೆ.13 ಗುರುವಾರದಂದು ಕರ್ನಾಟಕ ಬಂದ್ ಕೈ ಬಿಡುವಂತೆ ಸಿಎಂ ಬಿಎಸ್ವೈ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶಕ್ತಿಭವನದಲ್ಲಿ ಮಾತನಾಡಿದ ಅವರು, "ಕನ್ನಡ ಪರ ಸಂಘಟನೆಗಳು ಇಂದೇ ಬಂದು ಭೇಟಿಯಾಗಲಿ, ನಾನು ಮಾತುಕತೆ ನಡೆಸಲು ಸಿದ್ದ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಆಗ್ರಹಿಸಿ ಬಂದ್ ನಡೆಸುವ ಮುಖಾಂತರ ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಏನು ಮಾಡಬೇಕು ಅದನ್ನು ಮಾಡಿದ್ದೇವೆ. ಬಂದ್ ಕೈ ಬಿಟ್ಟು ಮನೆಗೆ ಬಂದು ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲು ನಾನು ಸಿದ್ದನಿದ್ದೇನೆ" ಎಂದರು.
"ನಾನು ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬ ನಿಲುವು ಹೊಂದಿದವನು.ನಾನು ಕನ್ನಡಿಗರ ಪರ ಇರುವಂತವನು. ಈ ವಿಚಾರವಾಗಿ ಕಾಂಗ್ರೆಸ್ ರಾಜಕಾರಣ ಮಾಡುವುದು ಸರಿಯಲ್ಲ" ಎಂದು ತಿಳಿಸಿದರು.
ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಫೆ.13 ಗುರುವಾರದಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಬಂದ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸೇರಿದಂತೆ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಬೆಂಬಲ ನೀಡಿವೆ.