ಬೆಂಗಳೂರು, ಫೆ.12 (DaijiworldNews/PY): "ವಾಹನ ಇದೆ ಅಂದಮೇಲೆ ನಿಯಮ ಉಲ್ಲಂಘನೆ ಕೇಸ್ ಇದ್ದೇ ಇರುತ್ತದೆ. ಹಾಗೆಯೇ ನಮ್ಮದು ಗಣಿ ವ್ಯವಹಾರದ ಕುಟುಂಬ. ಗಣಿ ಕಂಪೆನಿ ಮೇಲೆ ಅರಣ್ಯ ಉಲ್ಲಂಘನೆ ಪ್ರಕರಣಗಳು ಸಹಜ" ಎಂದು ನೂತನ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಈ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, "ನಮ್ಮದು ಪೂರ್ವಜರ ಕಾಲದಿಂದಲೂ ಗಣಿಗಾರಿಕೆ ನಡೆಸುತ್ತಿರುವ ಕುಟಂಬ ಹಾಗಾಗಿ ಸಣ್ಣಪುಟ್ಟ ಪ್ರಕರಣಗಳಿರುತ್ತವೆ. ಆದರೆ ಈ ಪ್ರಕರಣಗಳಿಂದಾಗಿ ಯಾವುದೇ ತೊಂದರೆಯಾಗುವುದಿಲ್ಲ. ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ" ಎಂದು ಹೇಳಿದರು.
"ಖಾತೆ ಬದಲಾವಣೆಗೆ ಸಿಎಂ ಬಳಿ ಬೇಡಿಕೆ ಇಟ್ಟಿರಲಿಲ್ಲ. ಇಂತಹ ಖಾತೆಯೇ ಬೇಕೆಂದೂ ಕೂಡ ಕೇಳಿರಲಿಲ್ಲ. ಅರಣ್ಯ ಖಾತೆ ನೀಡಿರುವುದು ತೃಪ್ತಿ ಇದೆ. ಮತ್ತೆ ಖಾತೆ ಬದಲಾಗುವುದಿಲ್ಲ. ಯಾವ ಶಾಸಕರಿಗೆ ಯಾವ ಖಾತೆ ನಿಭಾಯಿಸುವ ಸಾಮರ್ಥ್ಯ ಇದೆ ಎಂಬುದು ಸಿಎಂ ಬಿಎಸ್ವೈ ಅವರಿಗೆ ತಿಳಿದಿದೆ. ಹೀಗಾಗಿ ಬದಲಾವಣೆ ಮಾಡಿದ್ದಾರೆ ಎನ್ನಿಸುತ್ತದೆ" ಎಂದು ತಿಳಿಸಿದರು.
"ನಾನು ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ವಿಚಾರವನ್ನು ಮರೆತಿಲ್ಲ. ಈ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಹಾಗೂ ಸಂಪುಟ ವಿಸ್ತರಣೆಯಲ್ಲಿ ತಲ್ಲೀನರಾದ ಕಾರಣ ಇದಕ್ಕೆ ತಡೆಯಾಗಿದೆ. ಆದರೆ ಇದಕ್ಕೆ ಕಾಲ ಬರುತ್ತದೆ" ಎಂದರು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಿಎಸ್ವೈ ಅವರು, "ಸಮಯ ಬಂದಾಗ ಜಿಲ್ಲೆಯ ಎಲ್ಲಾ ಶಾಸಕರ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.