ಬೆಂಗಳೂರು, ಫೆ 12 (DaijiworldNews/SM): ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬಂದ್ ನಡೆಸದಂತೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಪರ ಸಂಘಟನೆಗಳು ಸರೋಜಿನಿ ಮಹಿಷಿ ವರದಿಯ ಬಗ್ಗೆ ತಮ್ಮ ಮನೆಗೆ ಬಂದು ಚರ್ಚಿಸಲಿ. ತಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ. ಬಂದ್ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂಬುವುದಾಗಿ ಅವರು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಪರ ಸಂಘಟನೆಗಳ ಬಂದ್ ಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ, ಈ ಹಿಂದೆ ಅವರೇ ಆಡಳಿತದಲ್ಲಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕನ್ನಡಿಗರ ಮೇಲೆ ಇಲ್ಲದ ಮಮತೆ ಈಗ ಎಲ್ಲಿಂದ ಬಂತು ಎಂಬುವುದಾಗಿ ಅವರು ಪ್ರಶ್ನಿಸಿದ್ದಾರೆ. ವಿರೋಧ ಪಕ್ಷದಲ್ಲಿದ್ದುಕೊಂಡು ಬಂದ್ ಗೆ ಬೆಂಬಲ ನೀಡಿ ಜನಸಾಮಾನ್ಯರಿಗೆ ತೊಂದರೆ ನೀಡುವ ಬದಲು, ಆಡಳಿತ ಪಕ್ಷದಲ್ಲಿದ್ದಾಗಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದಿದ್ದಾರೆ.