ಬೆಂಗಳೂರು, ಫೆ.13 (DaijiworldNews/PY): ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ ಕರ್ನಾಟಕ ಬಂದ್ಗೆ ಕರೆ ನೀಡಿದೆ.
ಆದರೆ, ವಾಟಾಳ್ ನಾಗರಾಜ್ ನೇತೃತ್ವದ ಸಂಘಟನೆಯೂ ಸೇರಿ ಕೆಲವು ಸಂಘಟನೆಗಳು ಬಂದ್ನಿಂದ ದೂರ ಉಳಿದಿವೆ. ಬಂದ್ ಹಿನ್ನೆಲೆಯಲ್ಲಿ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ನಗರ ಹಾಗೂ ಸಾರಿಗೆ ಸಂಸ್ಥೆ ಬಸ್ಗಳು ಎಂದಿನಂತೆ ಸಂಚರಿಸಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮಹಿಷಿ ವರದಿ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ಕನ್ನಡಪರ ಸಂಘಟನೆಗಳು 100 ದಿನಗಳಿಂದ ಧರಣಿ ನಡೆಸುತ್ತಿವೆ. ಹೋರಾಟಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಬಂದ್ಗೆ ಕರೆ ನೀಡಲಾಗಿದ್ದು, ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕನ್ನಡ ಕಾರ್ಯಕರ್ತರು ಮೆರವಣಿಗೆ ನಡೆಸಲಿದ್ದಾರೆ.
ಸಾರಿಗೆ ನಿಗಮಗಳ ಸಿಬ್ಬಂದಿ ಬಂದ್ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಕೆಲಸಕ್ಕೆ ಗೈರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಾರಿಗೆ ನೌಕರರ ಸಂಘದ ಮೂಲಗಳು ತಿಳಿಸಿವೆ.
ಓಲಾ– ಊಬರ್ ಚಾಲಕರ ಸಂಘ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ, ದಲಿತ ಸಂಘಟನೆಗಳು. ಆದರ್ಶ ಆಟೊ ಯೂನಿಯನ್, ರಾಜ್ಯ ಲಾರಿ ಮಾಲೀಕರ ಸಂಘ, ಜೈ ಭಾರತ್ ಚಾಲಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಟ್ಯಾಕ್ಸಿ ಹಾಗೂ ಆಟೊ ಸಂಚಾರದಲ್ಲಿ ವ್ಯತ್ಯಯವಾಗುವ ಸಂಭವವಿದೆ.
ಆರೋಗ್ಯ ಸೇವೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್ಗಳು, ಹಾಲು, ಹಣ್ಣು, ತರಕಾರಿ,ಮಾರುಕಟ್ಟೆಗಳು ತೆರೆದಿರುತ್ತವೆ. ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್ಗಳನ್ನು ಮುಚ್ಚುವುದಿಲ್ಲ ಎಂದು ಹೊಟೇಲ್ ಮಾಲೀಕರ ಸಂಘ ತಿಳಿಸಿದೆ. ಆದರೂ ಪರಿಸ್ಥಿತಿ ಅನುಗುಣವಾಗಿ ಈ ಸೇವೆಗಳಲ್ಲಿ ಏರುಪೇರಾಗುವ ಸಾಧ್ಯತೆಯಿದೆ.
ಕನ್ನಡ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರ ಜೊತೆ ಮಾತನಾಡಿ ಬೆಂಬಲ ಕೇಳಲಾಗಿದೆ ಎಂದು ಕರ್ನಾಟಕ ಸಂಘಟನೆಗಳ ಮುಖಂಡ ನಾಗೇಶ್ ತಿಳಿಸಿದ್ದಾರೆ. ಬಂದ್ಗೆ ಬೆಂಬಲ ಇಲ್ಲ ಎಂದು ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂದ್ ವೇಳೆ ಶಾಲಾ– ಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಅದಾಗಿಯೂ ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬಹುದು ಎಂದೂ ಅವರು ತಿಳಿಸಿದ್ದಾರೆ.
ಸಾರಿಗೆ ನಿಗಮಗಳ ಸಿಬ್ಬಂದಿ ನೈತಿಕ ಬೆಂಬಲ ನೀಡಿದ್ದರೂ ಬಂದ್ನಲ್ಲಿ ಭಾಗವಹಿಸುವುದಿಲ್ಲ. ಗಲಭೆಗಳು ನಡೆದರೆ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬಂದ್ಗೆ ನಮ್ಮ ಬೆಂಬಲ ಇಲ್ಲ. ನಾವು ಬಂದ್ಗೆ ಕರೆ ಕೊಟ್ಟಿಲ್ಲ. ಮಹಿಷಿ ವರದಿ ಜಾರಿಗೆ ಹೋರಾಡುತ್ತಾ ಬಂದಿದ್ದೇವೆ. ವಿಧಾನಮಂಡಲ ಅಧಿವೇಶನ ಆರಂಭವಾದ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಒತ್ತಡ ಹೇರುತ್ತೇವೆ ಎಂದು ಕನ್ನಡ ಒಕ್ಕೂಟಗಳ ಕ್ರಿಯಾ ಸಮಿತಿ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಬಂದ್ಗೆ ನಮ್ಮ ಬಾಹ್ಯ ಬೆಂಬಲವಿದೆ. ಆದರೆ, ಎಂದಿನಂತೆ ಚಿತ್ರೀಕರಣಗಳು ನಡೆಯಲಿದೆ. ನಾವು ಬಂದ್ ಮಾಡಿದರೆ ಕಾರ್ಮಿಕರಿಗೆ ತೊಂದರೆಯಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.
ಕರ್ನಾಟಕ ಬಂದ್ ಕೈಬಿಡಿ. ನಿಮ್ಮ ಬೇಡಿಕೆಗಳಲ್ಲಿ ಸಾಧ್ಯವಾಗುವುದನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಜನರಿಗೆ ತೊಂದರೆ ಆಗುವುದು ಬೇಡ ಎಂದು ಬಿಎಸ್ವೈ ತಿಳಿಸಿದ್ದಾರೆ.