ನವದೆಹಲಿ, ಫೆ.13 (DaijiworldNews/PY): ಜಪಾನ್ ಕರಾವಳಿಯ ಕ್ರೂಸೆ ಶಿಪ್ನ ಇಬ್ಬರು ಭಾರತೀಯ ಸಿಬ್ಬಂದಿಗಳು ಕೊರೋನಾ ವೈರಸ್ನಿಂದ ಬಳಲುತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಜಪಾನ್ನ ಭಾರತದ ರಾಯಭಾರಿ ತಿಳಿಸಿದ್ದಾರೆ. 174 ಮಂದಿ ಮಾರಕ ಕೊರೊನಾ ವೈರಸ್ಗೆ ತುತ್ತಾಗಿದ್ದಾರೆ ಎಂದು ಜಪಾನ್ನ ಅಧಿಕೃತ ಮೂಲಗಳು ಬುಧವಾರ ಖಚಿತಪಡಿಸಿವೆ.
ಒಟ್ಟು ಇಬ್ಬರು ಸಿಬ್ಬಂದಿ ಸೇರಿದಂತೆ 138 ಭಾರತೀಯರು ನೌಕೆಯಲ್ಲಿದ್ದರು. ನೌಕೆಯಲ್ಲಿ ಪ್ರಯಾಣಿಸುತ್ತಿರುವವರಲ್ಲಿ ಕೊರೋನಾ ವೈರಸ್ ತಗುಲಿರುವ ಬಗ್ಗೆ ಅನುಮಾನಗೊಂಡು ಅವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಲಾಗಿದೆ. ಜಪಾನ್ ಅಧಿಕಾರಿಗಳು ಫೆ.19ರವರೆಗೆ ನೌಕೆಯನ್ನು ನಿರ್ಬಂಧಿಸಿದ್ದಾರೆ ಎಂದು ರಾಯಭಾರ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದೆ. ಇಬ್ಬರು ಭಾರತೀಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 174 ಮಂದಿಗೆ ಕೊರೋನಾ ವೈರಸ್ ತಗುಲಿರುವುದು ಪರೀಕ್ಷೆಯಿಂದ ತಿಳಿದುಬಂದಿದೆ.
ಜಪಾನಿನಲ್ಲಿರುವ ಭಾರತೀಯರಿರುವ ಸ್ಥಳಕ್ಕೆ ತೆರಳಿರುವ ರಾಯಭಾರಿ ಕಚೇರಿ ಅಧಿಕಾರಿಗಳು, ಜಪಾನಿನ ಆರೋಗ್ಯ ಹಾಗೂ ಸುರಕ್ಷತೆ ಕ್ರಮಗಳನ್ನು ವಿವರಿಸಿ, ಸಹಕರಿಸುವಂತೆ ಕೋರಿದ್ದು, ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿರುವ ಎಲ್ಲರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.