ನವದೆಹಲಿ, ಫೆ.13 (DaijiworldNews/PY): "ದೇಶದ 130 ಕೋಟಿ ಜನರಲ್ಲಿ ಕೇವಲ 1.5 ಕೋಟಿ ಮಂದಿ ತೆರಿಗೆ ಪಾವತಿಸುವವರು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟೈಮ್ಸ್ ನೌ ಶೃಂಗದಲ್ಲಿ ಮಾತನಾಡಿದ ಅವರು, "ನಾವು 2022ರಲ್ಲಿ ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಸಂಭ್ರಮಿಸಲಿದ್ದೇವೆ. ಈ ಸುಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಉದ್ದೇಶಗಳನ್ನು ಇದರ ಜೊತೆ ಹೊಂದಿಸಿಕೊಳ್ಳುವಂತೆ ಕರೆ ನೀಡುತ್ತಿದ್ದೇನೆ. ದೇಶದ ಸ್ವಾತಂತ್ರ್ಯಕ್ಕೆ ಜೀವವನ್ನೇ ಬಲಿದಾನ ಮಾಡಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು, ದೇಶದ ಜನ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಪ್ರತಿಜ್ಞೆ ಮಾಡಬೇಕು" ಎಂದು ಹೇಳಿದರು.
"ಕಳೆದ 5 ವರ್ಷಗಳಲ್ಲಿ ಸಾಕಷ್ಟು ಕೆಲಸಗಳಾಗಿವೆ. ಆದರೆ ಇನ್ನೂ ಆಗಬೇಕಿರುವ ಕೆಲಸ ಸಾಕಷ್ಟಿವೆ. ಭಾರತವನ್ನು ತೆರಿಗೆ ಬದ್ದತೆಯ ಸಮಾಜವಾಗಿ ಪರಿವರ್ತಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ" ಎಂದು ತಿಳಿಸಿದರು.
"ದೇಶದಲ್ಲಿ ಹಲವಾರು ಮಂದಿ ಲೆಕ್ಕ ಪರಿಶೋಧಕರು, ವಕೀಲರು, ವೈದ್ಯರು ಇದ್ದಾರೆ. ಮೂರು ಕೋಟಿಗೂ ಅಧಿಕ ಮಂದಿ ವಹಿವಾಟು ಹಾಗೂ ವಿಹಾರಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಕೇವಲ 2200 ಮಂದಿ ವೃತ್ತಿಪರರು ಮಾತ್ರ ವಾರ್ಷಿಕ ಒಂದು ಕೋಟಿ. ರೂ ಆದಾಯ ಘೋಷಿಸಿದ್ದಾರೆ. ಇದರಲ್ಲಿ ಹೆಚ್ಚಿನ ಮಂದಿ ಸುಪ್ರೀಂ ಕೋರ್ಟ್ನಲ್ಲಿದ್ದಾರೆ" ಎಂದರು.
"ಜನರು ವಿದೇಶಗಳಿಗೆ ವಿಹಾರಕ್ಕೆ ಹೋಗುವಾಗ, ಕಾರು ಖರೀದಿಸುವಾಗ ಖುಷಿಪಡುತ್ತೇವೆ. ಆದರೆ, ತೆರಿಗೆ ಪಾವತಿಸುವವರ ಸಂಖ್ಯೆ ನೋಡಿದಾಗ ಆತಂಕವಾಗುತ್ತದೆ" ಎಂದು ಹೇಳಿದರು.