ಹೊಸಪೇಟೆ, ಫೆ.13 (DaijiworldNews/PY): ಅರಣ್ಯ ಪ್ರದೇಶದ ಗಡಿ ಗುರುತು ಬದಲಿಸಿರುವುದು ಹಾಗೂ ಅಕ್ರಮವಾಗಿ ಅದಿರು ರಫ್ತು ಮಾಡಿರುವುದಕ್ಕೆ ಸಂಬಂಧಿಸಿದಂತೆ ಆನಂದ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಒಟ್ಟು 15 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭ ಅವರಿಗೆ ಅರಣ್ಯ ಖಾತೆ ನೀಡಿರುವುದು ಕಟುಕನ ಕೈಗೆ ಕುರಿ ಕೊಟ್ಟಂತಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.
ನಕಲಿ ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಗಣಿ ಗುತ್ತಿಗೆ ಪಡೆದಿರುವುದು ಹಾಗೂ ಬೆಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಹಾಗೂ ಅರಣ್ಯ ಇಲಾಖೆಯ ಗಡಿ ಗುರುತು ಬದಲಿಸಿರುವದನ್ನು ಸಂಬಂಧಿಸಿ ಆನಂದ್ ಸಿಂಗ್ ಅವರ ವಿರುದ್ದ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯ, ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಹಾಗೂ ಹೊಸಪೇಟೆಯ ಸೆಷೆನ್ಸ್ ನ್ಯಾಯಾಲದಯಲ್ಲಿ ಕಳವು, ವಂಚನೆ, ವಿಶ್ವಾಸದ್ರೋಹ ಕುರಿತಂತೆ ಭಾರತೀಯ ದಂಡ ಸಂಹಿತೆ ಹಾಗೂ ಗಣಿ ಮತ್ತು ಖನಿಜ ಕಾಯ್ದೆಯಡಿ ದಾಖಲಾದ ಒಟ್ಟು 15 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.
2013 ಹಾಗೂ 2015ರಲ್ಲಿ ಅಕ್ರಮವಾಗಿ ಅದಿರು ಸಾಗಣೆಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ತನಿಖಾ ತಂಡವು ಸಿಂಗ್ ಅವರನ್ನು ಬಂಧಿಸಿತ್ತು. ಆದರೆ ಗಂಭೀರ ಸ್ವರೂಪದ ಪ್ರಕರಣಗಳ ವಿಚಾರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಿಎಂ ಬಿಎಸ್ವೈ ಅವರು ಆನಂಧ್ ಸಿಂಗ್ ಅವರಿಗೆ ಅರಣ್ಯ ಖಾತೆಯ ಜವಾಬ್ದಾರಿ ವಹಿಸಿ ತಪ್ಪು ಮಾಡಿದ್ದಾರೆ. ತಮ್ಮ ವಿರುದ್ಧದ ಪ್ರಕರಣಗಳಿಂದ ಬಚಾವ್ ಆಗಲು ಸಿಂಗ್ ಅವರಿಗೆ ಸಿ.ಎಂ. ಅವರೇ ಉತ್ತಮ ದಾರಿ ಮಾಡಿಕೊಟ್ಟಿದ್ದಾರೆ. ಇದು ಹಿತಾಸಕ್ತಿ ಸಂಘರ್ಷವೂ ಹೌದು ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿ, ಅನೇಕರು ಜೈಲು ಸೇರುವಂತೆ ಮಾಡಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಹೇಳಿದ್ದಾರೆ.
ಆನಂದ್ ಸಿಂಗ್ ಅವರು ತನ್ನ ಸ್ವಾರ್ಥಕ್ಕಾಗಿ ಇಡೀ ಅರಣ್ಯ ಪ್ರದೇಶವನ್ನೇ ನುಂಗಿ ನೀರು ಕುಡಿದಿದ್ದಾರೆ. ಅಂತಹವರಿಗೆ ಮತ್ತೆ ಲೂಟಿ ಹೊಡೆಯಲು ಆಸ್ಪದ ಮಾಡಿಕೊಟ್ಟಂತಾಗಿದೆ. ನೈತಿಕತೆಯಿದ್ದರೆ ಸ್ವತಃ ಆನಂದ್ ಸಿಂಗ್ ಅವರೇ ಆ ಖಾತೆ ವಹಿಸಿಕೊಳ್ಳಬಾರದಿತ್ತು. ಅವರು ಬೇನಾಮಿ ಹೆಸರಿನಲ್ಲಿ ರಾಮಗಡದ ಅರಣ್ಯ ಪ್ರದೇಶವನ್ನು ಕಂದಾಯ ಜಮೀನಾಗಿ ಪರಿವರ್ತಿಸಿ, ಸಾವಿರಾರು ಮರಗಳ ಮಾರಣ ಹೋಮ ನಡೆಸಿ, ಗಣಿಗಾರಿಕೆ ಮಾಡಿದ್ದಾರೆ. ಬೆಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಅಕ್ರಮ ಗಣಿಗಾರಿಕೆಯಿಂದ ಅನೇಕರು ಜೈಲು ಸೇರಿದ್ದರು. ಆ ಸಂದರ್ಭ ಸಿಎಂ ಆಗಿದ್ದ ಯಡಿಯೂರಪ್ಪನವರು ಸಾಕಷ್ಟು ಮುಜುಗರಕ್ಕೊಳಪಟ್ಟಿದ್ದರು. ಈಗ ಪುನಃ ಅಂತಹ ಮುಜುಗರಕ್ಕೆ ಒಳಗಾಗುವುದು ಬೇಡವೆಂದರೆ ಸಿಂಗ್ ಅವರಿಗೆ ಕೊಟ್ಟಿರುವ ಖಾತೆ ತಕ್ಷಣವೇ ಹಿಂಪಡೆಯಬೇಕು. ಅವರನ್ನು ಸಂಪುಟದಿಂದ ಕೈಬಿಡಲು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ಅಪರಾಧ ಹಿನ್ನೆಲೆಯುಳ್ಳವರ ಸಂಖ್ಯೆ ಅಧಿಕವಾಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಹೀಗಿರುವಾಗ ಅದಕ್ಕೆ ತದ್ವಿರುದ್ಧವಾಗಿ ಸಿಎಂ ಅವರು ಗಂಭೀರ ಅಪರಾಧ ಪ್ರಕರಣ ಇರುವ ಆನಂದ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ನಾಚಿಕೆಗೇಡು ಎಂದು ಸಾಮಾಜಿಕ ಕಾರ್ಯಕರ್ತ ಯೂಸುಫ್ ಪಟೇಲ್ ಹೇಳಿದ್ದಾರೆ.