ನವದೆಹಲಿ, ಫೆ.13 (DaijiworldNews/PY): ಸಂವಿಧಾನದ ವಿಧಿ 19(1)ರ ಪ್ರಕಾರ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಅಂತ ಸ್ವಾತಂತ್ರ್ಯಗಳಿಗೆ ತಕ್ಕ ನಿರ್ಬಂಧಗಳೂ ಇವೆ. ದೇಶ ಸ್ವತಂತ್ರವಾಗಿದೆ ಆಜಾದಿ ಘೋಷಣೆ ಯಾಕೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಜನರು ಸರ್ಕಾರವನ್ನು ಮುಕ್ತವಾಗಿ ಟೀಕಿಸುತ್ತಾರೆ. ಯಾರಿಗೆ ಬೇಕಾದರೂ ಅವರು ಮತ ಹಾಕಬಹುದು. ಕೆಲವರು ವಿಶ್ವ ವಿದ್ಯಾಲಯಗಳನ್ನು ಮುತ್ತಿಗೆ ಹಾಕುತ್ತಾರೆ. ಪೊಲೀಸರೊಂದಿಗೆ ಜಗಳವಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ನಾವು ಆಜಾದಿ..ಆಜಾದಿ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ಕೆಲವು ದಿನಗಳಿಂದ ಕೇಳುತ್ತಿದ್ದೇವೆ. ಯಾವುದರಿಂದ ಆಜಾದಿ? ಈ ದೇಶ ಸ್ವತಂತ್ರವಾಗಿದೆ. ಹೀಗಿರುವಾಗ ನೀವು ಯಾರಿಂದ ಸ್ವಾತಂತ್ರ್ಯ ಬಯಸುತ್ತಿದ್ದೀರಿ? ಎಂದು ಬುಧವಾರ ಟ್ವೀಟ್ ಮಾಡಿದ್ದರು.
ಟೈಮ್ಸ್ ನೌ ಸಮಾವೇಶದಲ್ಲಿ ಮಾತನಾಡಿದ ಪ್ರಸಾದ್ ಅವರು, ನಿಮ್ಮ ಸ್ವಾತಂತ್ರ್ಯದ ಮಟ್ಟ ಎಷ್ಟಿದೆ ಅಂದರೆ ನೀವು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುತ್ತೀರಿ. ಪೊಲೀಸರೊಂದಿಗೆ ಕಾದಾಡುತ್ತೀರಿ, ಯಾರಿಂದ ನಿಮಗೆ ಸ್ವಾತಂತ್ರ್ಯ ಬೇಕು? ಈ ಬಗ್ಗೆ ಚರ್ಚೆಯಾಗಬೇಕು. ವಿಪಕ್ಷಗಳು ಸಂವಿಧಾನದ ಸಂಸ್ಥೆಗಳನ್ನು ದೂರುತ್ತಿವೆ ಎಂದು ಹೇಳಿದರು.
ಭಾರತದ ಚುನಾವಣಾ ಆಯೋಗನ್ನು ಯಾರು ಟೀಕಿಸುತ್ತಿರುವುದು. ಸಿಎಜಿಯನ್ನು ಸಾರ್ವಜನಿಕವಾಗಿ ಪರಿಹಾಸ ಯಾರು ಮಾಡಿದ್ದು. ಸುಪ್ರೀಂಕೋರ್ಟ್ ವಿರುದ್ಧ ಹೇಳಿಕೆ ನೀಡಿದವರು ಯಾರು. ಮಾಧ್ಯಮಗಳ ವಿರುದ್ಧ ದೂರುತ್ತಿರುವವರು ಯಾರು. ಯಾಕೆಂದರೆ ರಾಹುಲ್ ಗಾಂಧಿಗೆ ಸರ್ಕಾರವನ್ನು ಮುಖಾಮುಖಿಯಾಗಲು ಸಾಧ್ಯವಾಗುತ್ತಿಲ್ಲ ಎಂದರು.
ಭಾರತದ ಸಶಸ್ತ್ರ ಪಡೆ ಹಾಗೂ ಇತರ ಸಂಸ್ಥೆಗಳ ಸಮಗ್ರತೆಯಲ್ಲಿ ರಾಜಿ ಮಾಡಿಕೊಂಡಿದ್ದು ಯಾರು. ಬಾಲಕೋಟ್ ಬಗ್ಗೆ ಸಾಕ್ಷ್ಯ ಕೇಳುತ್ತಿರುವವರು ಯಾರು. ಭಾರತಕ್ಕೆ ಸಂಬಂಧಪಟ್ಟಂತೆ ಇದೆಲ್ಲವೂ ತೊಂದರೆಯನ್ನೊಡ್ಡುವ ವಿಷಯಗಳೇ ಆಗಿವೆ. ಪ್ರಶಸ್ತಿ ವಾಪಸ್ ಮಾಡಲು ತುದಿಗಾಲಲ್ಲಿ ನಿಂತಿರುವವರಲ್ಲಿ ನನ್ನದೊಂದು ಪ್ರಶ್ನೆ. ಏನೆಂದರೆ, ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಅತ್ಯಾಚಾರ ಮಾಡಿ ಅವರನ್ನು ಬಲವಂತವಾಗಿ ಮತಾಂತರ ಮಾಡುವಾಗ ನೀವ್ಯಾಕೆ ಸುಮ್ಮನಿದ್ದೀರಿ. ಅವರ ಯಾತನೆಗಳು ನಿಮ್ಮನ್ನು ಕೆರಳಿಸಿಲ್ಲವೇ ಎಂದು ಹೇಳಿದ್ದಾರೆ.