ಬೆಳಗಾವಿ, ಫೆ.13 (DaijiworldNews/PY): ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಪ್ರೇಮಿಗಳ ದಿನಾಚರಣೆ ಆಚರಿಸದಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಎಲ್ಲಾ ಕಾಲೇಜು ಆವರಣಗಳಲ್ಲಿ ಕರಪತ್ರಗಳನ್ನು ಹಂಚಲಾಗುವುದು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹಲವು ವರ್ಷಗಳಿಂದ ಹಿಂದೂಪರ ಹೋರಾಟಗಾರ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆಯು ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತಲೇ ಬಂದಿದೆ. ಪ್ರೇಮಿಗಳ ದಿನಾಚರಣೆಯಂದು ಕೆಲವೆಡೆ ಪ್ರೇಮಿಗಳ ಮೇಲೆ ದಾಳಿ ಮಾಡಿರುವ ಘಟನೆಯೂ ನಡೆದಿದೆ. ಅದರಂತೆ ಈ ವರ್ಷವೂ ಪ್ರೇಮಿಗಳ ದಿನಾಚರಣೆ ವಿರುದ್ಧ ಯುವಕರಲ್ಲಿ ಅರಿವು ಮೂಡಿಸುವಲ್ಲಿ ಶ್ರೀರಾಮ ಸೇನೆ ಮುಂದಾಗಿದೆ.
ಈ ವಿಚಾರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಪ್ರೇಮಿಗಳ ದಿನಾಚರಣೆಯ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಒಂದು ಲಕ್ಷ ಕರಪತ್ರಗಳನ್ನು ಮುದ್ರಿಸಿ ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳಿಗೆ ಕಳುಹಿಸಲಾಗಿದೆ. ಅದನ್ನು ಜೆರಾಕ್ಸ್ ಮಾಡಿ ಶ್ರೀರಾಮ ಸೇನೆ ಕಾರ್ಯಕರ್ತರು ಕಾಲೇಜುಗಳ ಬಳಿ ಯುವಕ-ಯುವತಿಯರಿಗೆ ಹಂಚುತ್ತಾರೆ ಎಂದರು.
ಪ್ರೇಮಿಗಳ ದಿನಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಫೆ.14ರಂದು ಪ್ರೇಮಿಗಳ ದಿನವನ್ನಾಗಿ ಆಚರಿಸುವ ಪಾಶ್ಚಾತ್ಯ ಸಂಸ್ಕೃತಿಗೆ ನಮ್ಮ ವಿರೋಧವಿದೆ. ನಮ್ಮ ಸಂಸ್ಕೃತಿ ಮೇಲೆ ದಾಳಿಯಾಗುತ್ತಿದೆ. ಭಾರತದ ಯುವಕರು ವಿದೇಶಿ ಸಂಸ್ಕೃತಿಯ ದಾಸರಾಗುತ್ತಿದ್ದಾರೆ. ಈ ಪ್ರೇಮಿಗಳ ದಿನದಂದು ಎಲ್ಲರೂ ತಂದೆ-ತಾಯಿಯನ್ನು ಪ್ರೀತಿಸಬೇಕು ಎಂದು ತಿಳಿಸಿದ್ಧಾರೆ.