ನವದೆಹಲಿ, ಫೆ.13 (DaijiworldNews/PY): ರಾಜಕೀಯ ಪಕ್ಷಗಳು ಕ್ರಿಮಿನಲ್ ಪೂರ್ವಾಪರ ಹೊಂದಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವೆಬ್ಸೈಟ್ನಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಎಲ್ಲಾ ರಾಜಕೀಯ ಪಕ್ಷಗಳಿಗೆ ಆದೇಶ ನೀಡಿದೆ.
ರಾಜಕೀಯದಲ್ಲಿ ಅಪರಾಧ ಹೆಚ್ಚಾಗುತ್ತಿದ್ದು, ಈ ಹಿನ್ನಲೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಅಪರಾಧಗಳನ್ನು ಬಹಿರಂಗಗೊಳಿಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ 2018ರಲ್ಲಿ ಅಪೆಕ್ಸ್ ಕೋರ್ಟ್ ತೀರ್ಪು ನೀಡಿತ್ತು. 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ರಾಜಕೀಯ ಪಕ್ಷಗಳು ಪಾಲಿಸಿಲ್ಲ ಎಂದು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ಈ ಆದೇಶವನ್ನು ಹೊರಡಿಸಿದೆ ಎಂದು ವರದಿ ತಿಳಿಸಿದೆ.
ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಅಪರಾಧ ಹೆಚ್ಚಾಗುತ್ತಿದೆ ಎಂದು ಸುಪ್ರೀಂ ತಿಳಿಸಿದ್ದು, ಒಂದು ವೇಳೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿ ದಾಖಲಿಸಲು ವಿಫಲರಾದರೆ, ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು ಎಂದು ತಿಳಿಸಿದೆ.
ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ರಾಜಕೀಯ ಪಕ್ಷಗಳ ವೆಬ್ಸೈಟ್ನಲ್ಲಿ ವಿವರ ದಾಖಲಿಸಬೇಕು. ಅಲ್ಲದೇ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಮಾಹಿತಿ ಬಹಿರಂಗಪಡಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.