ಕೊಪ್ಪಳ, ಫೆ 13 (Daijiworld News/MB) : ಮುಂದಿನ ಎರಡು ವರ್ಷದಲ್ಲಿ 16 ಸಾವಿರ ಪೊಲೀಸರನ್ನು ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಮದಿಗೆ ಮಾತನಾಡಿದ ಅವರು, "ಈ ವರ್ಷ 6 ಸಾವಿರ ಪೊಲೀಸರನ್ನು ನೇಮಕಾತಿ ಮಾಡಿ ಮುಂದಿನ ವರ್ಷ ಉಳಿದ 10 ಸಾವಿರ ಪೊಲೀಸರನ್ನು ನೇಮಕಾತಿ ಮಾಡಲು ಕ್ರಮಕೈಗೊಳ್ಳಲಾಗುವುದು. ಈ ಬಾರಿಯ ಬಜೆಟ್ನಲ್ಲಿ ಠಾಣೆಗೆ ಬರುವ ಜನರೊಂದಿಗೆ ಬೆರೆತು ಸಮಸ್ಯೆ ಬಗೆ ಹರಿಸಲು ಜನ ಸ್ನೇಹಿ ಪೊಲೀಸ್ ಕಾರ್ಯಕ್ರಮ ಪ್ರಸ್ತಾಪಿಸಲಾಗುವುದು. ಹಾಗೆಯೇ ಪೊಲೀಶರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೊಪ್ಪಳದ ಡಿಆರ್ ನೇಮಕಾತಿ ಸಮಸ್ಯೆಯಾಗಿರುವುದು ನನ್ನ ಗಮನಕ್ಕೂ ಬಂದಿದೆ. ಅದಕ್ಕೆ ಉತ್ತರ ಬರೆದಿದ್ದು ಅದು ಶೀಘ್ರ ಬಗೆಹರಿಸಲಾಗುವುದು. ಹಾಗೆಯೇ ಕೊಪ್ಪಳದಲ್ಲಿ ಮರಳು ದಂಧೆ, ಇಸ್ಪೀಟು ಆಟದ ಕುರಿತು ಸಹಿತ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ರ್ಶೀರವಾಗಿ ಪರಿಶೀಲನೆ ಮಾಡುತ್ತೇನೆ. ಅದನ್ನೂ ಮೀರಿ ಅಕ್ರಮ ನಡೆಯುತ್ತಿದ್ದರೆ ಅವರ ವಿರುದ್ಧವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಹಾಗೆಯೇ ಈ ಸಂದರ್ಭದಲ್ಲಿ ಕೊಪ್ಪಳದ ಬಾಂಗ್ಲಾ ವಲಸಿಗರ ಕುರಿತಂತೆ ಅವರು ಏಲ್ಲಿ ಕೆಲಸ ಸಿಗುತ್ತೋ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಭಾಗದ ಕೈಗಾರಿಕೆಯಲ್ಲಿ ಕೆಲಸ ಮಾಡಲು ಬಂದಿದ್ದಾರೆ. ಇಲ್ಲಿ ಬಂದಿರುವ ಜನರ ಕುರಿತಾಗಿ ಆಯಾ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹ ಮಾಡಲಾಗುವುದು ಎಂದು ಹೇಳಿದರು.
ಹೊಸಪೇಟೆ ಬಳಿ ಸಚಿವರ ಪುತ್ರನ ಕಾರು ಅಪಘಾತ ಪ್ರಕರಣದಲ್ಲಿ ಅವರ ಪುತ್ರನನ್ನು ಪೊಲೀಸ್ ಇಲಾಖೆ ಸೇಫ್ ಮಾಡುವ ವಿಚಾರ ನನಗೆ ತಿಳಿದುಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಲಿದ್ದೇನೆ. ಅಲ್ಲಿ ಏನು ನಡೆದಿದೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ನಾನು ಪ್ರತಿಕ್ರಿಯೆ ನೀಡಲಿದ್ದೇನೆ ಎಂದರು.
ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಈಗಾಗಲೆ ಸಿಎಂ ಯಡಿಯೂರಪ್ಪ ಅವರು ಹಲವು ಸಭೆ ನಡೆಸಿದ್ದಾರೆ. ಕೃಷ್ಣಾ ಯೋಜನೆಗೆ ಹೆಚ್ಚಿನ ಒತ್ತು ನೀಡುವಂತೆ ಸಿಎಂ ಅವರು ಹೇಳಿದ್ದಾರೆ. ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳೆ ಅವರು ಖಾತೆಯ ಹೊಣೆ ಹೊತ್ತಿದ್ದಾರೆ. ಈ ಭಾಗದ ನೀರಾವರಿಗೆ ಒತ್ತು ನೀಡಲಾಗುವುದು ಎಂದರು.
ಬಸವರಾಜ ರಾಯರೆಡ್ಡಿ ಅವರು ಈಗ ಕೃಷ್ಣಾ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರದ್ದೇ ಸರ್ಕಾರ 6 ವರ್ಷ ಅಧಿಕಾರದಲ್ಲಿತ್ತಲ್ಲ. ಆಗೊಂದು ಮಾತು, ಈಗೊಂದು ಅವರಿಂದ ಬರುತ್ತಿದೆ. ಅವರಲ್ಲಿಯೇ ದ್ವಂದ್ವ ಮಾತುಗಳು ಬರುತ್ತಿವೆ ಎಂದರು.
ಇನ್ನು ಗಂಗಾವತಿ ತಾಲೂಕಿನ ಬಳಿ 24 ಕೋಟಿ ವೆಚ್ಚದಲ್ಲಿ ನವಲು ಜಲಾಶಯದ ಡಿಪಿಆರ್ ಕೈಗೊಳ್ಳಲು ಸಿಎಂ ಅವರು ಆದೇಶ ಮಾಡಿದ್ದಾರೆ ಎಂದರು.