ಬೆಳಗಾವಿ, ಫೆ.13 (DaijiworldNews/PY): "ದೆಹಲಿಯ ಮತದಾರರು ಧರ್ಮದ ಹೆಸರಿನಲ್ಲಿ ಒಡೆದು ಆಳುವವರನ್ನು ದೂರವಿಟ್ಟಿದ್ದಾರೆ. ಅವರ ತತ್ವ-ಸಿದ್ದಾಂತಗಳಿಗೆ ಮನ್ನಣೆ ದೊರಕಿಲ್ಲ" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಗುರುವಾರ ಬೆಳಗಾವಿ ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ನಾಯಕರು, ಕೇಂದ್ರದ ಹತ್ತಾರು ಸಚಿವರು ನಾವೇ ಗೆಲ್ಲುತ್ತೇವೆ ಎಂದು ನಡೆಸಿದ್ದ ಪ್ರಚಾರ ಯಶಸ್ವಿಯಾಗಿಲ್ಲ. ಕಾಂಗ್ರೆಸ್ ಪಕ್ಷವೂ ಚುನಾವಣೆಯಲ್ಲಿ ಭಾಗವಹಿಸಿತ್ತು. ಆದರೆ ಯಶಸ್ಸು ಸಿಕ್ಕಿಲ್ಲ. ಸೋಲು-ಗೆಲುವು ಸಾಮಾನ್ಯ. ನಮ್ಮ ಪಕ್ಷದ ನ್ಯೂನ್ಯತೆ ಹಾಗೂ ಕೊರತೆಗಳನ್ನು ಚರ್ಚಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು" ಎಂದು ತಿಳಿಸಿದರು.
"ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇನೆ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇನೆ, ಅಚ್ಛೇ ದಿನ್ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರನ್ನು ಭಾವನಾತ್ಮಕವಾಗಿ ಸೆಳೆದು, ಎರಡು ಬಾರಿ ಪ್ರಧಾನಿಯಾಗಲಿಲ್ಲವೇ. ಚುನಾವಣೆಯಲ್ಲಿ ಕೇವಲ ಅಭಿವೃದ್ಧಿ ವಿಷಯವೊಂದೇ ಮುಖ್ಯವಾಗಲ್ಲ. ಭಾವನಾತ್ಮಕ ವಿಷಯವೂ ಪರಿಣಾಮ ಬೀರುತ್ತದೆ" ಎಂದು ಹೇಳಿದರು.
"ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಾತ್ಮ ಗಾಂಧಿ ಅವರ ಜೊತೆ ಚರ್ಚಿಸಿ, ಪೂನಾ ಒಪ್ಪಂದದ ಭಾಗವಾಗಿ ಮೀಸಲಾತಿಯನ್ನು ನೀಡಿದ್ದಾರೆ. ಸಂವಿಧಾನದ 16ನೇ ವಿಧಿಯಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ, ಉತ್ತರಾಖಂಡ ಪ್ರಕರಣದಲ್ಲಿ ಇದನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ತಿಳಿಸಿದರು.
"ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲಿಯೇ ನೇಮಕ ಮಾಡಲಾಗುವುದು. ಪಕ್ಷದ ಎಲ್ಲ ಪ್ರಮುಖ, ಹಿರಿಯ ಮುಖಂಡರ ಜೊತೆ ಹಾಗೂ ಜಿಲ್ಲಾ ಮಟ್ಟದ ನಾಯಕರ ಜೊತೆ ಚರ್ಚಿಸಲಾಗುತ್ತಿದ್ದು, ಸದ್ಯದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದರು.