ಬೆಂಗಳೂರು, ಫೆ.13 (DaijiworldNews/PY): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮೆಜೆಸ್ಟಿಕ್, ಕೆ. ಆರ್. ಮಾರುಕಟ್ಟೆ, ಸಂಗೊಳ್ಳಿ ರಾಯಣ್ಞ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಬಿಎಂಟಿಸಿ ಬಸ್ಗಳು ಎಂದಿನಂತೆ ಓಡಾಡುತ್ತಿದ್ದು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಸ್ ಸಂಚಾರ ತಡೆಯಲು ಯತ್ನಿಸಿದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಆನಂದ ರಾವ್ ವೃತ್ತದಲ್ಲಿ ಹೋಟೆಲ್ಗಳನ್ನು ಬಲವಂತವಾಗಿ ಬಂದ್ ಮಾಡಲು ಯತ್ನಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವಿಷಯ ತಿಳಿದ ಕೂಡಲೆ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
180 ಮಂದಿ ರೌಡಿಗಳು ವಶಕ್ಕೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್ಗಳು ಸೇರಿ 180 ಮಂದಿಯನ್ನು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಉತ್ತರ ವಿಭಾಗದ ಪೊಲೀಸರು ಗುರುವಾರ ಮುಂಜಾನೆ ವಶಕ್ಕೆ ಪಡೆದಿದ್ದಾರೆ.
ಮುಂಜಾನೆ 4 ಗಂಟೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಬುಧವಾರ ರಾತ್ರಿ ಪೊಲೀಸ್ ಅಧಿಕಾರಿಗಳು ವಿಶೇಷ ಗಸ್ತು ನಡೆಸಿದ್ದಾರೆ. ಈ ಸಂದರ್ಭ, ಹಿಂದೆ ಕಾವೇರಿ ಹೋರಾಟ ಸೇರಿದಂತೆ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾದವರು ಸೇರಿ ರೌಡಿಶೀಟರ್ಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರ ಪೈಕಿ ಕೆಲವರು ಸಂಶಯಾಸ್ಪದವಾಗಗಿ ತಿರುಗಾಡುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರಿಗೆ ಪೊಲೀಸರು ಗೃಹ ಬಂಧನ ವಿಧಿಸಿದ್ದಾರೆ. ಕನ್ನಡಪರ ಸಂಘಟನೆಗಳಿಂದ ಪ್ರತಿಭಟನಾ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೀಣ್ ಶೆಟ್ಟಿ ಅವರ ಆರ್ ಟಿ ನಗರದ ನಿವಾಸದ ಮುಂದೆ ಪೋಲಿಸರನ್ನು ನಿಯೋಜಿಸಲಾಗಿದೆ.
ಬಂದ್ಗೆ ಪ್ರವೀಣ್ ಶೆಟ್ಟಿ ಬೆಂಬಲ ನೀಡಿಲ್ಲ. ಹೀಗಿದ್ದರೂ ಒತ್ತಾಯ ಪೂರ್ವಕವಾಗಿ ಗೃಹ ಬಂಧನದಲ್ಲಿಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮನೆಯಿಂದ ಹೊರ ಹೋಗದಂತೆ ಶೆಟ್ಟಿಗೆ ಸೂಚಿಸಲಾಗಿದೆ ಎನ್ನಲಾಗಿದೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ಶ್ರಮಜೀವಿ ಕಾರ್ಮಿಕ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ಹಾಗೂ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ. ಮಹಾದೇವಪುರದ ರಾಘವೇಂದ್ರ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ಗಳಲ್ಲಿ ಕಾರ್ಯಕರ್ತರನ್ನು ಕರೆತರಲು ಈ ಇಬ್ಬರು ಮುಂದಾಗಿದ್ದರು ಎಂಬ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.