ಹೊಸಪೇಟೆ, ಫೆ 13 (Daijiworld News/MB) : ಸೋಮವಾರ ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಲು ಸಚಿವರೊಬ್ಬರ ಪುತ್ರ ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರು ಓಡಿಸಿದ್ದೇ ಕಾರಣ, ಆತನನ್ನು ಪೊಲೀಸರು ರಕ್ಷಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ಕಂದಾಯ ಸಚಿವ ಆರ್. ಅಶೋಕ್ ಅವರ ಮಗ ಶರತ್ ಕಾರು ಓಡಿಸಿ, ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಅವರನ್ನು ಸ್ಥಳದಿಂದ ಬೇರೊಂದು ಕಾರಿನಲ್ಲಿ ತಕ್ಷಣವೇ ಕಳುಹಿಸಿಕೊಡಲಾಗಿದೆ. ಅಷ್ಟೇ ಅಲ್ಲ, ಎಫ್.ಐ.ಆರ್.ನಲ್ಲಿ ಅವರು ಹೆಸರು ಸೇರದಂತೆ ಪೊಲೀಸ್ ಅಧಿಕಾರಿಗಳು ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ" ಎಂದು ಆರೋಪ ಮಾಡಿದ್ದರು.
ಹಾಗೆಯೇ ಪ್ರತ್ಯಕ್ಷದರ್ಶಿಯೊಬ್ಬರು ಘಟನೆ ನಡೆದ ಸ್ಥಳದಲ್ಲಿ ಸಚಿವರ ಮಗ ಇದ್ದರು. ನಂತರ ಬೇರೊಂದು ಕಾರಿನಲ್ಲಿ ಅಲ್ಲಿಂದ ನಿರ್ಗಮಿಸಿದರು ಎಂದು ಹೇಳಿದ್ದಾರೆ.
ಚಾಲಕ ಸೇರಿದಂತೆ ಒಟ್ಟು ಐವರು ಯುವಕರು ಕಾರಿನಲ್ಲಿದ್ದರು. ಅವರೆಲ್ಲರೂ ಬೆಂಗಳೂರಿನವರು ಎಂದು ಗೊತ್ತಾಗಿದೆ. ಆದರೆ, ಸಚಿವ ಅಶೋಕ್ ಅವರ ಮಗನೇ ಕಾರು ಓಡಿಸುತ್ತಿದ್ದರೆ ಎಂಬುದು ಖಚಿತವಾಗಿಲ್ಲ. ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಮುಲಾಜಿಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಎಚ್. ಶೇಖರಪ್ಪ ಮಾಧ್ಯಮವೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಸೋಮವಾರ ಮಧ್ಯಾಹ್ನ 3ಕ್ಕೆ ಐವರು ಯುವಕರು ತಾಲ್ಲೂಕಿನ ಹಂಪಿ ನೋಡಿಕೊಂಡು ಬೆಂಗಳೂರಿಗೆ (ಕಾರಿನ ಸಂಖ್ಯೆ ಕೆ.ಎ. 05 ಎಂಡಬ್ಲ್ಯೂ 0357) ವಾಪಸಾಗುತ್ತಿದ್ದರು. ಮರಿಯಮ್ಮನಹಳ್ಳಿ ಸಮೀಪ ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗವಾಗಿ ಬಂದ ಕಾರು, ರಸ್ತೆ ಬದಿಯ ಚಹಾದಂಗಡಿ ಬಳಿ ನಿಂತಿದ್ದ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕ (18) ಅವರಿಗೆ ಡಿಕ್ಕಿ ಹೊಡೆದಿದ್ದು ಸುಮಾರು 100 ಮೀಟರ್ ದೂರ ಅವರನ್ನು ಕಾರು ಎಳೆದೊಯ್ದಿದೆ.
ರವಿ ಹಾಗೂ ಕಾರಿನಲ್ಲಿದ್ದ ಸಚಿನ್ (27) ಸ್ಥಳದಲ್ಲೇ ಮೃತಪಟ್ಟಿದ್ದು ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಪೊಲೀಸರು ಈ ಬಗ್ಗೆ ಎಫ್.ಐ.ಆರ್. ದಾಖಲುಮಾಡಿದ್ದು, ರಾಹುಲ್ ಕಾರು ಓಡಿಸುತ್ತಿದ್ದರು. ರಾಕೇಶ್, ಶಿವಕುಮಾರ ಹಾಗೂ ವರುಣ್ ಕಾರಿನಲ್ಲಿದ್ದ ಇತರೆ ಯುವಕರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಸ್ತವದಲ್ಲಿ ಸಚಿವರ ಮಗನೇ ಕಾರು ಓಡಿಸುತ್ತಿದ್ದರು. ಅವರನ್ನು ರಕ್ಷಿಸುವುದಕ್ಕಾಗಿಯೇ ಪೊಲೀಸರು ಬೇರೊಬ್ಬ ಯುವಕನ ಹೆಸರು ಸೇರಿಸಿದ್ದಾರೆ ಎನ್ನಲಾಗಿದೆ.
ಈ ಕಾರು ಬೆಂಗಳೂರಿನ ಕೆಂಗೇರಿಯಲ್ಲಿರುವ ನ್ಯಾಶನಲ್ ಪಬ್ಲಿಕ್ ಶಾಲೆಯ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ದೃಢಪಡಿಸಿದ್ದಾರೆ.