ಬೆಂಗಳೂರು, ಫೆ 13 (Daijiworld News/MB) : "ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ನಡೆದ ಕಾರು ಅಪಘಾತಕ್ಕೂ ನನ್ನ ಪುತ್ರನಿಗೂ ಯಾವುದೇ ಸಂಬಂಧವಿಲ್ಲ" ಎಂದು ಕಂದಾಯ ಸಚಿವ ಆರ್.ಅಶೋಕ ಗುರುವಾರ ಸ್ಪಷ್ಟಣೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಅಪಘಾತಕ್ಕೂ ನನ್ನ ಪುತ್ರನಿಗೂ ಯಾವುದೇ ಸಂಬಂಧವಿಲ್ಲ ಎಂದ ಮೇಲೆ ಈ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸಚಿವರು ತಮ್ಮ ಪ್ರಭಾವ ಬಳಸಿಕೊಂಡು ಅಪಘಾತ ಮಾಡಿದ ಪುತ್ರ ಶರತ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಕಾರು ನೋಂದಣಿಯಾಗಿರುವ ಸಂಸ್ಥೆಗೂ, ನಮಗೂ ಸಂಬಂಧವಿಲ್ಲ" ಎಂದು ತಿಳಿಸಿದ್ದಾರೆ.
ಆದರೆ ಕಾರು ಅಪಘಾತವಾದ ಸಂದರ್ಭದಲ್ಲಿ ತಮ್ಮ ಪುತ್ರ ಎಲ್ಲಿದ್ದರು ಎಂಬುದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.
"ಘಟನೆಗೆ ಸಂಬಂಧಿಸಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದ್ದು, ಈ ಸಮಯದಲ್ಲಿ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಕಾನೂನು ಪಾಠ ಕಲಿಸುತ್ತದೆ. ತನಿಖೆ ನಡೆದು ಸತ್ಯ ಹೊರ ಬರಲಿದ್ದು, ಕಾನೂನಿನ ಮುಂದೆ ಎಲ್ಲರೂ ಸಮಾನರು. ಈ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ" ಎಂದು ಹೇಳಿದರು
ಸೋಮವಾರ ಮಧ್ಯಾಹ್ನ 3ಕ್ಕೆ ಐವರು ಯುವಕರು ತಾಲ್ಲೂಕಿನ ಹಂಪಿ ನೋಡಿಕೊಂಡು ಬೆಂಗಳೂರಿಗೆ (ಕಾರಿನ ಸಂಖ್ಯೆ ಕೆ.ಎ. 05 ಎಂಡಬ್ಲ್ಯೂ 0357) ವಾಪಸಾಗುತ್ತಿದ್ದರು. ಮರಿಯಮ್ಮನಹಳ್ಳಿ ಸಮೀಪ ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗವಾಗಿ ಬಂದ ಕಾರು, ರಸ್ತೆ ಬದಿಯ ಚಹಾದಂಗಡಿ ಬಳಿ ನಿಂತಿದ್ದ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕ (18) ಅವರಿಗೆ ಡಿಕ್ಕಿ ಹೊಡೆದಿದ್ದು ಸುಮಾರು 100 ಮೀಟರ್ ದೂರ ಅವರನ್ನು ಕಾರು ಎಳೆದೊಯ್ದಿದೆ.
ರವಿ ಹಾಗೂ ಕಾರಿನಲ್ಲಿದ್ದ ಸಚಿನ್ (27) ಸ್ಥಳದಲ್ಲೇ ಮೃತಪಟ್ಟಿದ್ದು ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಪೊಲೀಸರು ಈ ಬಗ್ಗೆ ಎಫ್.ಐ.ಆರ್. ದಾಖಲುಮಾಡಿದ್ದು, ರಾಹುಲ್ ಕಾರು ಓಡಿಸುತ್ತಿದ್ದರು. ರಾಕೇಶ್, ಶಿವಕುಮಾರ ಹಾಗೂ ವರುಣ್ ಕಾರಿನಲ್ಲಿದ್ದ ಇತರೆ ಯುವಕರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಸ್ತವದಲ್ಲಿ ಸಚಿವರ ಮಗನೇ ಕಾರು ಓಡಿಸುತ್ತಿದ್ದರು. ಅವರನ್ನು ರಕ್ಷಿಸುವುದಕ್ಕಾಗಿಯೇ ಪೊಲೀಸರು ಬೇರೊಬ್ಬ ಯುವಕನ ಹೆಸರು ಸೇರಿಸಿದ್ದಾರೆ ಎನ್ನಲಾಗಿದೆ.