ಗುವಾಹಾಟಿ, ಫೆ 14 (Daijiworld News/MB) : ಸರಕಾರಿ ಪ್ರಾಯೋಜಕತ್ವದಲ್ಲಿ ಸಂಸ್ಕೃತ ಸಂಸ್ಥೆಗಳನ್ನು ಮತ್ತು ಮದ್ರಸಗಳನ್ನು ನಡೆಸದೇ ಇರಲು ಅಸ್ಸಾಂ ಸರಕಾರ ನಿರ್ಧರಿಸಿದೆ.
ಈ ಕುರಿತಾಗಿ ಮಾತನಾಡಿದ ಶಿಕ್ಷಣ ಸಚಿವ ಹಿಮಾಂತ ಶರ್ಮ ಬಿಸ್ವಾ, "ಮುಂದಿನ ದಿನಗಳಲ್ಲಿ ಒಟ್ಟು 614 ಸಂಸ್ಥೆಗಳನ್ನು ಮುಚ್ಚಲಾಗುತ್ತದೆ. ಧಾರ್ಮಿಕ ಶಿಕ್ಷಣಕ್ಕಾಗಿ ಸರಕಾರಿ ಹಣಬಳಕೆ ಬೇಡ ಮತ್ತು ಧರ್ಮ ಬೋಧನೆ ಸರಕಾರದ ಕೆಲಸವೇ ಅಲ್ಲ" ಎಂದು ಹೇಳಿದ್ದಾರೆ.
"ಇದೊಂದು ಜಾತ್ಯತೀತ ರಾಷ್ಟ್ರ. ಅರೇಬಿಕ್ ಹಾಗೂ ಇತರ ಧಾರ್ಮಿಕ ವಿಚಾರಗಳನ್ನು ಭೋದನೆ ಮಾಡುವುದು ಸರ್ಕಾರದ ಕೆಲಸವಲ್ಲ" ಎಂದು ಹೇಳಿದ್ದಾರೆ.
"ರಾಜ್ಯ ಸರಕಾರದ ವ್ಯಾಪ್ತಿಯಲ್ಲಿರುವ 614 ಶಿಕ್ಷಣ ಸಂಸ್ಥೆಗಳನ್ನು ಇತರ ಸಾಮಾನ್ಯ ಶಿಕ್ಷಣ ಸಂಸ್ಥೆಗಳಂತೆ ಮಾರ್ಪಾಡು ಮಾಡಲಾಗುವುದು. ಆದರೆ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಅವರಿಗೆ ನಿವೃತ್ತಿಯಾಗುವವರೆಗೆ ದೊರೆಯಬೇಕಾದ ವೇತನ ಮತ್ತು ಸವಲತ್ತುಗಳನ್ನು ಸರ್ಕಾರ ನೀಡಲಿದೆ" ಎಂದು ಬಿಸ್ವಾ ಹೇಳಿದ್ದಾರೆ.
"ಪ್ರಸ್ತುತ ಮದ್ರಾಸಗಳಿಗೆ ವಾರ್ಷಿಕವಾಗಿ 3-4 ಕೋಟಿ ರೂ. ಹಾಗೂ ಸಂಸ್ಕೃತ ಸಂಸ್ಥೆಗಳಿಗೆ 1 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
ಜಮೀಯತ್ ಉಲೇಮಾ ನೇತೃತ್ವದಲ್ಲಿ ನಡೆಸಲಾಗುತ್ತಿರುವ 900 ಮದ್ರಸಗಳು, ಖಾಸಗಿ ವ್ಯಾಪ್ತಿಯಲ್ಲಿ ಇರುವ ಸಂಸ್ಕೃತ ಸಂಸ್ಥೆಗಳು ಮುಂದುವರಿಯಲಿವೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಜಮೀಯತ್ ಉಲೇಮಾದ ಸಂಚಾಲಕ ಮಸೂದ್ ಅಖ್ತರ್, "ಸರ್ಕಾರಿ ಮದ್ರಸ ಮುಚ್ಚಿದರೆ ಖಾಸಗಿ ಮದ್ರಸಗಳಿಗೆ ಸಮಸ್ಯೆಯಾಗಲಾರದು. ನಾವು ಸರಕಾರದಿಂದ ಒಂದೇ ಒಂದು ರೂಪಾಯಿಯನ್ನು ಪಡೆಯುತ್ತಿಲ್ಲ" ಎಂದಿದ್ದಾರೆ.