ಶ್ರೀನಗರ, ಫೆ 14 (Daijiworld News/MB) : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ 2019ರ ಫೆ. 14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಸ್ಮರಣಾರ್ಥವಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ ಸ್ಮಾರಕ ಸ್ತಂಭ ಸ್ಥಾಪನೆ ಮಾಡಿ ಗೌರವ ಸಲ್ಲಿಸಲಿದೆ.
ಇಂದು ಈ ಸಮಾರಂಭವು ಪುಲ್ವಾಮದ ಲೆಟ್ಪೋರಾ ಎಂಬಲ್ಲಿರುವ ಸಿಆರ್ಪಿಎಫ್ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು ಸಿಆರ್ಪಿಎಫ್ನ ವಿಶೇಷ ಮಹಾ ನಿರ್ದೇಶಕ ಜೂಲ್ಫಿಕರ್ ಹಸನ್, ಕಾಶ್ಮೀರ ವಲಯದ ಪೊಲೀಸ್ ಮಹಾ ನಿರ್ದೇಶಕ ರಾಜೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಿಆರ್ಪಿಎಫ್ನ ವಿಶೇಷ ಮಹಾ ನಿರ್ದೇಶಕ ಜೂಲ್ಫಿಕರ್ ಹಸನ್ ಈ ಸಮಾರಂಭದ ಕುರಿತಾಗಿ ಮಾತನಾಡಿ, "ವೀರಯೋಧರಿಗೆ ಗೌರವ ಸಮರ್ಪಣೆ ಮಾಡುವ ಈ ಸಮಾರಂಭದಲ್ಲಿ, ಸ್ಮಾರಕ ಸ್ತಂಭವನ್ನು ಅನಾವರಣ ಮಾಡಲಾಗುತ್ತದೆ. ಈ ಸ್ತಂಭದ ಮೇಲೆ ಹುತಾತ್ಮ ಯೋಧರ ಹೆಸರುಗಳನ್ನು ಬರೆಯಲಾಗಿದೆ. ಹಾಗೆಯೇ ಈ ಸಮಾರಂಭದಲ್ಲೇ ರಕ್ತದಾನ ಶಿಬಿರವನ್ನೂ ಆಯೋಜನೆ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಯೋಧರು ಹುತಾತ್ಮರಾದ ದಿನದಂದೇ ಅವರ ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಹಿನ್ನಲೆಯಲ್ಲಿ ಯೋಧರ ಕುಟುಂಬಸ್ಥರನ್ನು ಈ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ ಎಂದು ತಿಳಿಸಿದ್ದಾರೆ.
2019ರ ಫೆ. 14ರಂದು ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರಿದ್ದ ಬಸ್ ಮೇಲೆ ಜೈಷ್ ಏ ಮೊಹಮದ್ ಸಂಘಟನೆ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಘಟನೆಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.