ಬೆಂಗಳೂರು, ಫೆ 14 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕಲು ಬೆಂಗಳೂರು ನಗರದಲ್ಲಿ 2019ರ ಡಿಸೆಂಬರ್ 18ರಿಂದ 3 ದಿನಗಳ ಕಾಲ "ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಅಕ್ರಮ ಹಾಗೂ ಕಾನೂನು ಬಾಹಿರ" ಎಂದು ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತಾಗಿ ಹೈಕೋರ್ಟ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು, ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಮಹತ್ವದ ಆದೇಶ ನೀಡಿದೆ.
ಹಾಗೆಯೇ ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜೆಯೊಬ್ಬನ ಮೂಲಭೂತ ಹಕ್ಕು ಎಂದೂ ಕೂಡಾ ಹೈಕೋರ್ಟ್ ಹೇಳಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನೀತಿ, ಧೋರಣೆಗಳ ವಿರುದ್ಧ ಬಂದ್, ರಸ್ತೆ ತಡೆ, ಮೆರವಣಿಗೆ ನಡೆಸುವ ಎಲ್ಲ ಅಧಿಕಾರ ಜನರಿಗೆ ಇದೆ ಎಂಬುದನ್ನು ಸುಪ್ರೀಂ ಕೋರ್ಟ್ ರಾಮ್ಲೀಲಾ ಮೈದಾನದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿದೆ ಎಂದೂ ಕೂಡಾ ಹೂಕೋರ್ಟ್ ಹೇಳಿದೆ.
ಸಕಾರಣಗಳನ್ನು ಉಲ್ಲೇಖಿಸದೆ, ಸಿಆರ್ಪಿಸಿ–1974ರ ಕಲಂ 144 ಅನ್ವಯ ನಿಷೇಧಾಜ್ಞೆ ಹೇರಿದ ಪೊಲೀಸ್ ಆದೇಶ ಅನೂರ್ಜಿತ ಎಂದು ಹೇಳಿದ ನ್ಯಾಯಪೀಠ ಅರ್ಜಿದಾರರ ಮನವಿಗಳನ್ನು ಭಾಗಶಃ ಮಾನ್ಯ ಮಾಡಿದೆ.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿ,"ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದರೆ ಸಮಾಜ ಘಾತುಕ ಶಕ್ತಿಗಳು ಅದರ ದುರ್ಲಾಭ ಪಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಲು ನೀಡಿದ್ದ ಅನುಮತಿ ಹಿಂಪಡೆಯಲಾಗಿತ್ತು" ಎಂದು ಹೇಳಿದರು.
ಅರ್ಜಿದಾರರ ಪರ ವಕೀಲ ಪ್ರೊ.ರವಿವರ್ಮ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, "ಇದೊಂದು ಪೊಲೀಸ್ ರಾಜ್ಯವಾಗಿದೆ. ಸಂವಿಧಾನದ 19 (1) (ಬಿ) ವಿಧಿಯ ಅನುಸಾರ ನೀಡಿರುವ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಏಕೈಕ ದುರುದ್ದೇಶದಿಂದ ನಿಷೇಧಾಜ್ಞೆ ಹೇರುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮಾಡಲಾಗಿದೆ" ಎಂದರು.
ಈ ವಿಚಾರಕ್ಕೆ ಸಂಬಂಧಿಸಿ ಸುದೀರ್ಘ ವಾದ–ಪ್ರತಿವಾದ ನಡೆದಿದ್ದು ಅದನ್ನು ಆಲಿಸಿದ ನ್ಯಾಯಪೀಠ, "ಪೊಲೀಸರು, ಆದೇಶ ಹೊರಡಿಸುವ ಮುನ್ನ ಸೂಕ್ತ ವಿಚಾರಣೆ ನಡೆಸಿ ಅಗತ್ಯ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಒಂದು ವೇಳೆ ಆದೇಶ ನ್ಯಾಯಾಂಗದ ಪರಾಮರ್ಶೆಗೆ ಒಳಪಟ್ಟಾಗ ಸಮರ್ಥನೀಯ ಎನಿಸುವಂತಿರಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಲೋಪ ಮಾಡಲಾಗಿದೆ" ಎಂದರು.
ರಾಜ್ಯಸಭಾ ಸದಸ್ಯ ಪ್ರೊ.ಎಂ.ಬಿ.ರಾಜೀವ್ ಗೌಡ, ಶಾಸಕಿ ಸೌಮ್ಯಾ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ದಿವ್ಯಾ ಬಾಲಗೋಪಾಲ್, ಲಿಯೊ ಎಫ್. ಸಲ್ಡಾನ, ಕವಿತಾ ಲಂಕೇಶ್, ಎಂ.ಡಿ.ಪಲ್ಲವಿ ಮತ್ತು ಅಶ್ವಿನಿ ಓಬುಳೇಶ್ ಈ ಅರ್ಜಿಗಳನ್ನು ಸಲ್ಲಿಸಿದ್ದರು.