ನವದೆಹಲಿ, ಫೆ 14 (Daijiworld News/MB) : "ಪುಲ್ವಾಮದಲ್ಲಿ ಕಳೆದ ವರ್ಷ ನಡೆದ ದಾಳಿಯಿಂದಾಗಿ ಹುತಾತ್ಮರಾದ ಭದ್ರತಾ ಸಿಬ್ಬಂದಿಯ ಹುತಾತ್ಮತೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
"ರಾಷ್ಟ್ರದ ಸೇವೆ ಮತ್ತು ರಕ್ಷಣೆಗಾಗಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ತಮ್ಮ ಜೀವವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು" ಎಂದು ಅವರು ಟ್ವೀಟ್ ಮಾಡಿದ್ದಾರೆ.
2019 ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೆಥ್ಪೋರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುವ ವಾಹನಗಳ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಹುತಾತ್ಮ ಯೋಧರಿಗೆ ಮೋದಿ ಗೌರವ ಸಲ್ಲಿಸಿದ್ದಾರೆ.
"ಕಳೆದ ವರ್ಷ ನಡೆದ ಪುಲ್ವಾಮ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ದೈರ್ಯಶಾಲಿ ಹುತಾತ್ಮರಿಗೆ ಗೌರವ. ಅವರು ದೇಶ ಸೇವೆಗಾಗಿ ಹಾಗೂ ರಾಷ್ಟ್ರದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು. ಭಾರತ ಈ ಹುತಾತ್ಮರನ್ನು ಎಂದಿಗೂ ಮರೆಯುವುದಿಲ್ಲ" ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
"ಪುಲ್ವಾಮ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಹಾಗೂ ಮಾತೃಭೂಮಿಗೆ ಸರ್ವೋಚ್ಛ ತ್ಯಾಗ ಮಾಡಿದ ಅವರ ಕುಟುಂಬಗಳಿಗೆ ಭಾರತ ದೇಶ ಎಂದೆಂದಿಗೂ ಕೃತಜ್ಞರಾಗಿರಬೇಕು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.