ರಾಯಚೂರು, ಫೆ 14 (Daijiworld News/MB) : ಸಚಿವ ಆನಂದಸಿಂಗ್ಗೆ ಅರಣ್ಯ ಇಲಾಖೆ ಖಾತೆ ನೀಡಿರುವುದು ಕಳ್ಳನ ಕೈಗೆ ಕೀಲಿ ಕೈ ಕೊಟ್ಟಂತೆ ಎಂದು ಮಾಜಿ ಸಚಿವ ಹೆಚ್.ಎಂ ರೇವಣ್ಣ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, "ಗಣಿ ವ್ಯವಾಹಾರದಲ್ಲಿ ಸ್ವಲ್ಪ ಅರಣ್ಯ ಅಸ್ತವ್ಯಸ್ತವಾಗುವುದು ಸರಿ ಎಂದು ಹೇಳುವ ಸಚಿವನಿಂದ ಏನನ್ನು ನಿರೀಕ್ಷಿಸಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಿರುವುದನ್ನು ನೋಡಿದರೆ ಇಂಥಹ ಪರಿಸ್ಥಿತಿ ಯಾರಿಗೂ ಬರುವುದು ಬೇಡ ಎಂದು ಅನಿಸುತ್ತದೆ. ವಿಶ್ವನಾಥ್ ಸ್ಥಿತಿಯಂತೂ ಕೇಳುವುದೇ ಬೇಡ ಎಂದಿದ್ದಾರೆ.
ಇನ್ನು ಒಂದು ವಾರದಲ್ಲಿ ಸಿದ್ದರಾಮಯ್ಯನವರೇ ಪಕ್ಷದ ಅಧ್ಯಕ್ಷರಾಗಬೇಕಾ..? ಬೇಡವಾ..? ಎನ್ನುವ ವಿಷಯ ತೀರ್ಮಾನವಾಗಲಿದೆ. ನಾಯಕ ಸಮಾಜ ಹಾಗು ಕುರುಬ ಸಮಾಜದಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಗುವ ಪರಿಪಾಠ ನಡೆಯುತ್ತಿದೆ. ಈ ವೈಷಮ್ಯವನ್ನು ಈ ಎರಡು ಸಮಾಜದ ಗುರುಗಳ ಹಾಗೂ ಮುಖಂಡರ ಸಭೆ ನಡೆಸಿ ಬಗೆಹರಿಸಲಾಗುತ್ತದೆ ಎಂದು ತಿಳಿಸಿದರು.
ಹಾಗೆಯೇ ಮಾಜಿ ಪ್ರಧಾನಿ ಸಮಯಕ್ಕೆ ಸರಿಯಾಗಿ ಬಣ್ಣ ಬದಲಾಯಿಸಿಕೊಳ್ಳುವಲ್ಲಿ ನಿಸ್ಸೀಮರು ಅಂತ ಕಿಡಿಕಾರಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿಲ್ ಕುಮಾರ್ ಸ್ಪರ್ಧೆ ಹಿನ್ನೆಲೆ ದಳದವರು ಚರ್ಚಿಸಿ ಈಗ ಅಭ್ಯರ್ಥಿ ನಿಲ್ಲಿಸಿದ್ದಾರೆ. ನಮ್ಮಲ್ಲಿ ಚರ್ಚೆ ಆಗಿಲ್ಲ. ಎರಡೂ ಪಕ್ಷದವರು ಸೇರಿ ಅಭ್ಯರ್ಥಿ ನಿಲ್ಲಿಸಿಲ್ಲ ಎಂದು ರೇವಣ್ಣ ಹೇಳಿದರು.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಬಿಜೆಪಿ ಸರ್ಕಾರದಲ್ಲಿ ಸ್ಥಗಿತಗೊಂಡಿದೆ. ಯಡಿಯೂರಪ್ಪ ಪೆನ್ನಲ್ಲಿ ಇಂಕೇ ಇಲ್ಲ ಅನಿಸುತ್ತೆ ಅವರು ಏನು ಬರೆಯುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ನೀಡುತ್ತಿಲ್ಲ ಹೆಚ್.ಎಂ ರೇವಣ್ಣ ಬೇಸರ ವ್ಯಕ್ತಪಡಿಸಿದರು.